ಬುಧವಾರ, ಅಕ್ಟೋಬರ್ 16, 2019
26 °C

ರಾಯಚೂರು ವಿವಿ: ತ್ವರಿತ ಕ್ರಮಕ್ಕೆ ಬೋಸರಾಜು ಒತ್ತಾಯ

Published:
Updated:
Prajavani

ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದಿರುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನೊಳಗೊಂಡ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ, ರಾಜ್ಯಪಾಲರಿಂದ ಅನುಮೋದನೆ ಪಡೆಯುವುದಕ್ಕೆ ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017–18ನೇ ಸಾಲಿನ ಬಜೆಟ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಲಾಗಿತ್ತು. ಆನಂತರ ನಡೆದ ಅಧಿವೇಶನದಲ್ಲಿ ಆಗಿನ ಸರ್ಕಾರ ಒಪ್ಪಿಗೆ ಕೂಡ ಪಡೆದುಕೊಂಡು ರಾಜ್ಯಪಾಲರ ಅನುಮೋದನೆ ಕಳಿಸಿತ್ತು. ಆದರೆ, ರಾಜ್ಯಪಾಲರು ಎರಡು ಬಾರಿಯೂ ಅನುಮೋದನೆ ನೀಡದೇ ವಾಪಸ್ ಕಳುಹಿಸಿರುವುದು ಖಂಡನೀಯ ಎಂದರು.

ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ಆರಂಭಿಸಲು ಯಾವುದೇ ತಾರತಮ್ಯ ಮಾಡಬಾರದು. ಬೇರೆ ವಿಶ್ವವಿದ್ಯಾಲಯಗಳು ಸ್ಥಾಪನೆಗೆ ಅನುಮೋದನೆ ನೀಡಿದಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡಬೇಕು. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಯ ಭೇಟಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿರುವ ಯೋಜನೆಗಳಿಗೆ ಈಗಿನ ಸರ್ಕಾರ ಕತ್ತರಿ ಹಾಕುತ್ತಿದ್ದು, ನೂರಾರು ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ರಾಯಚೂರು ಹಾಗೂ ಯಾದಗಿರಿ ಆಯ್ಕೆಯಾಗಿದ್ದರೂ, ಇಲ್ಲಿಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ ದೊರೆಯುತ್ತಿಲ್ಲ. ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿಲ್ಲ. ಗಣೇಕಲ್ ಜಲಾಶಯಕ್ಕೆ ನೀರು ಹರಿಸುವ ₹140 ಕೋಟಿಯ ಯೋಜನೆ, ₹120 ಕೋಟಿ ಮೊತ್ತದ ಚಿಕ್ಕಮಂಚಾಲಿ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್, ಎಸ್‌ಸಿಪಿ, ಟಿಎಸ್‌ಪಿ ಅಡಿಯಲ್ಲಿ ₹14 ಕೋಟಿ ಯೋಜನೆಗೆ ಹಾಗೂ ಗುಂಜಹಳ್ಳಿಯ ಬಸವಕೆರೆ ಅಭಿವೃದ್ಧಿಯ ₹129 ಕೋಟಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಲಾಗಿದ್ದರೂ, ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದರು.

ಹೋರಾಟಗಾರ ರಜಾಕ್ ಉಸ್ತಾದ್ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿರುವ ರಾಜ್ಯಪಾಲರು ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡುತ್ತಿಲ್ಲ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕಾಲೇಜುಗಳನ್ನು ನಿರ್ವಹಿಸಲಾಗದೇ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೀಡು ಮಾಡಲಾಗಿದೆ. ಘೋಷಣೆಯಾಗಿ ಎರಡು ವರ್ಷಗಳು ಕಳೆದರೂ ಅನುಮೋದನೆ ನೀಡಲು ತುರ್ತು ಅಗತ್ಯವೇನಿದೆ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಮುಂದಿನ ವರ್ಷದಿಂದ ವಿಶ್ವವಿದ್ಯಾಲಯ ಆರಂಭಿಸಲು ಅನುಮತಿ ನೀಡದಿದ್ದರೆ ಮತ್ತೊಂದು ಸುತ್ತಿನ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸಂಸದ ಬಿ.ವಿ.ನಾಯಕ, ಮುಖಂಡರಾದ ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಬಸರಾಜರೆಡ್ಡಿ, ಜಯವಂತರಾವ ಪತಂಗೆ, ರುದ್ರಪ್ಪ ಅಂಗಡಿ, ತಾಯಣ್ಣ ನಾಯಕ, ಶಿವಮೂರ್ತಿ ಇದ್ದರು.

Post Comments (+)