ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಶ್ರದ್ಧಾ ಭಕ್ತಿಯ ನಾಗರಪಂಚಮಿ

Last Updated 2 ಆಗಸ್ಟ್ 2022, 2:01 IST
ಅಕ್ಷರ ಗಾತ್ರ

ಸಿಂಧನೂರು: ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ನಾಗರ ಕಟ್ಟೆಯ ಮೂರ್ತಿಗಳಿಗೆ ಹಾಲೆರೆದು, ನೈವೇದ್ಯ ಸಮರ್ಪಿಸುವ ಮೂಲಕ ನಾಗರಪಂಚಮಿ ಆಚರಣೆ ಮಾಡಿದರು.

ಕುಟುಂಬ ಸಮೇತವಾಗಿ ಶೇಂಗಾ ಉಂಡಿ, ರವೆ ಉಂಡಿ, ಮಂಡಾಳು ಉಂಡಿ, ಎಳ್ಳುಂಡಿ, ಹೋಳಿಗೆ, ಶ್ಯಾವಿಗೆ ಪಾಯಸ, ಸಂಡಿಗೆ ಹಾಗೂ ಹಪ್ಪಳ ಸೇರಿ ಬಗೆಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ ನಾಗಪ್ಪನಿಗೆ ಎಡೆ ನೀಡಿ ನಂತರ ಮನೆಯವರೆಲ್ಲ ತಿಂದು ಸಂಭ್ರಮಿಸಿದರು.

ನಗರದ ಬಸ್ ನಿಲ್ದಾಣದ ಬಳಿಯ ಅಂಬಾದೇವಿ ದೇವಸ್ಥಾನ, ಆದಿಶೇಷ ದೇವಸ್ಥಾನ, ಮಿನಿವಿಧಾನಸೌಧ ಮುಂದಿನ ಬನ್ನಿಕಟ್ಟೆ, ಸುಕಾಲಪೇಟೆ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ, ಆದರ್ಶ ಕಾಲೊನಿ, ನಟರಾಜ ಕಾಲೊನಿ, ಸತ್ಯಗಾರ್ಡನ್, ಉಪ್ಪಾರವಾಡಿಯ ವೆಂಕಟರಮಣ ದೇವಸ್ಥಾನ, ಬ್ರಾಹ್ಮಣರ ಓಣಿ, ಕೋಟೆ ವೀರಣ್ಣ ದೇವಸ್ಥಾನ, ಪಿಡಬ್ಲ್ಯೂಡಿ ಕ್ಯಾಂಪ್, ಮಹಿಬೂಬಿಯಾ ಕಾಲೊನಿಯ ಆಂಜನೇಯ ದೇವಸ್ಥಾನ, ರಾಮಕಿಶೋರ ಕಾಲೊನಿಯ ಗಣೇಶ ದೇವಸ್ಥಾನ, ಗಂಗಾನಗರ, ಸುಕಾಲಪೇಟೆ ಲಕ್ಷ್ಮಿ ದೇವಸ್ಥಾನ ಸೇರಿದಂತೆ ಗ್ರಾಮೀಣ ಪ್ರದೇಶಗಳ ನಾಗರ ಕಟ್ಟೆಗಳ ನಾಗರ ಮೂರ್ತಿಗಳಿಗೆ ಮಹಿಳೆಯರು, ಮಕ್ಕಳು, ಯುವತಿಯರು ಹಾಲೆರೆದು, ಸಿಹಿ ತಿಂಡಿಗಳ ನೈವೇದ್ಯ ಸಮರ್ಪಿಸಿದರು.

ಮಕ್ಕಳು ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲು ಮತ್ತು ನೀರನ್ನು ‘ಅಮ್ಮನ ಪಾಲು, ಅಪ್ಪನ ಪಾಲು, ನನ್ನ ಪಾಲು, ನಿನ್ನ ಪಾಲು’ ಎಂದು ನಾಗರ ಮೂರ್ತಿ ಮೇಲೆ ಹಾಕಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಅರಿಶಿಣ ಹಚ್ಚಿದ ನೂಲನ್ನು ಕೈಗೆ ಕಟ್ಟಿಕೊಂಡು ಮತ್ತು ಕೊಬ್ಬರಿ ಬಟ್ಟಲನ್ನು ಆಡಿಸುವ ಮೂಲಕ ಮಕ್ಕಳು ಹಬ್ಬದ ಸಂಭ್ರಮಪಟ್ಟರು. ಮನೆ ಹಾಗೂ ಮರಗಳಿಗೆ ಜೋಕಾಲಿ ಕಟ್ಟಿ ಆಡಿ ಸಿಹಿ ತಿಂದು ಸಂತಸಪಟ್ಟರು.

ನೈವೇದ್ಯ ಅರ್ಪಣೆ

ಹಟ್ಟಿಚಿನ್ನದಗಣಿ: ಪಟ್ಟಣದಲ್ಲಿ ನಾಗರಪಂಚಮಿ ಆಚರಿಸಲಾಯಿತು.

ಮಕ್ಕಳು–ಮಹಿಳೆಯರು ಕ್ಯಾಂಪ್ ಪ್ರದೇಶದಲ್ಲಿರುವ ನಾಗಲಿಂಗೇಶ್ವರ ದೇವಸ್ಧಾನಕ್ಕೆ ತೆರಳಿ ಮೂರ್ತಿಗಳಿಗೆ ಹಾಲೆರೆದರು. ನಾಗವಿಗ್ರಹಕ್ಕೆ ಅಭಿಷೇಕ ಮಾಡಿ, ಅರಿಶಿಣ ರಕ್ತಚಂದನ ಲೇಪಿಸಿ ಹೂವಿನಿಂದ ಅಲಂಕರಿಸಿದರು. ಅಕ್ಕಿ ಹಿಟ್ಟಿನಿಂದ ಮಾಡಿದ ರೊಟ್ಟಿ, ಸಿಹಿ ಕಜ್ಜಾಯ, ಹಾಲು–ಹಣ್ಣು ಹಾಗೂ ಕಾಯಿಯ ನೈವೇದ್ಯ ಅರ್ಪಿಸಿದರು.

ಗುರುಗುಂಟಾ ಯಲಗಟ್ಟಾ, ಆನ್ವರಿ, ವೀರಾಪುರ, ಗೆಜ್ಜಲಗಟ್ಟಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಬ್ಬ ಆಚರಿಸಲಾಯಿತು.

ಮನೆಯಿಂದ ತಂದ ಖಾದ್ಯ ಅರ್ಪಣೆ

ಮಸ್ಕಿ: ಪಟ್ಟಣದ ವಿವಿಧೆಡೆ ನಾಗರಪಂಚಮಿ ಆಚರಿಸಲಾಯಿತು.

ಮಹಿಳೆಯರು ಬೆಳಿಗ್ಗೆ ದೇವರ ಮನೆಗಳಲ್ಲಿ ಮಣ್ಣಿನ ನಾಗ ಮೂರ್ತಿಗೆ ಹಾಲೆರೆದರು.

ಕೆಲ ಕಡೆ ಮಹಿಳೆಯರು ಹಾಗೂ ಮಕ್ಕಳು ನಾಗಪ್ಪನ ಕಟ್ಟೆಗೆ ತೆರಳಿ ಕಲ್ಲಿನ ನಾಗರ ವಿಗ್ರಹಕ್ಕೆ ಅಭಿಷೇಕ ಮಾಡಿ ಹಾಲೆರೆಯುವ ಮೂಲಕ ಪೂಜೆ ಸಲ್ಲಿಸಿದರು.

ಮನೆಗಳಿಂದ ತಂದಿದ್ದ ಖಾದ್ಯಗಳನ್ನು ಅರ್ಪಿಸಿ ಕೋರಿಕೆ ಸಲ್ಲಿಸಿದರು.

ಹಾಲೆರೆದ ಮಹಿಳೆಯರು

ತುರ್ವಿಹಾಳ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ನಾಗರಪಂಚಮಿ ಅಂಗವಾಗಿ ನಾಗರ ಮೂರ್ತಿಗಳಿಗೆ ಹಾಲೆರೆದರು.

ಪಟ್ಟಣದ ಮಾರುತೇಶ್ವರ, ಶಂಕರಲಿಂಗೇಶ್ವರ, ಈರಣ್ಣ ದೇವಸ್ಥಾನ ಹಾಗೂ ತಾತಪ್ಪನ ಗದ್ದುಗೆಯಲ್ಲಿ ನಾಗರ ಮೂರ್ತಿಗಳಿಗೆ ಹಾಲೆರೆದರು.

ಅನ್ನಪೂರ್ಣ ಬಡಿಗೇರ ಮಾತನಾಡಿ,‘ಹಾವುಗಳಿಂದ ನಮ್ಮ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಪ್ರಾರ್ಥಿಸಿ ಪ್ರತಿವರ್ಷ ಹಾಲೆರೆಯುತ್ತೇವೆ’ ಎಂದು ತಿಳಿಸಿದರು.

‘ನಾಗರ ದೇವರಿಗೆ ಕಣ್ಣು ಬಟ್ಟಲು, ಕೋರೆ ಮೀಸೆ ಅಂಟಿಸುತ್ತೇವೆ. ಬಿಳಿ ನೂಲಿನ ದಾರವನ್ನು ಕೊರಳಲ್ಲಿ ಹಾಕಿಕೊಳ್ಳುತ್ತೇವೆ.

ಇದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದರು.ಬೆಳಿಗ್ಗೆ ಮಡೆಸ್ನಾನ ಮಾಡಿ ತಂದ ನೀರಿನಿಂದಲೇ ವಿವಿಧ ಬಗೆಯ ಹುಂಡಿ, ಕಾಳುಪಲ್ಲೆ, ಚಕ್ಕುಲಿ, ಒಗ್ಗರಣಿ, ಬಿಳಿಜೋಳಗಳಿಂದ ಮಾಡಿದ ಹಳ್ಳುಗಳು, ಹಂಟು, ಕೋಡುಬಳೆ ತಯಾರಿಸಲಾಯಿತು. ಬಳಿಕ ನಾಗರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಲಾಯಿತು.

ಅಲೆಮಾರಿಗಳಿಗೆ ಹಾಲು, ಬ್ರೆಡ್ ವಿತರಣೆ

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನ ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಹಾಲು ಮತ್ತು ಬ್ರೆಡ್ ವಿತರಣೆ ಮಾಡುವ ಮೂಲಕ ಸೋಮವಾರ ವಿಶಿಷ್ಟವಾಗಿ ನಾಗರಪಂಚಮಿ ಆಚರಣೆ ಮಾಡಲಾಯಿತು.

ಉಪನ್ಯಾಸಕ ಬಿ.ರವಿಕುಮಾರ ಸಾಸಲಮರಿ ಮಾತನಾಡಿ,‘ಹಸಿದವರಿಗೆ ಅನ್ನ ನೀಡಬೇಕೇ ಹೊರತು ವೇದಾಂತವನ್ನಲ್ಲ. ಪ್ರಗತಿಪರವಾದ ನೆಲೆ ಕಂಡುಕೊಳ್ಳಬೇಕಾದರೆ ಮೊದಲು ಎಲ್ಲರೂ ಮೌಢ್ಯತೆಯಿಂದ ಹೊರಬಂದು ವಾಸ್ತವ ಬದುಕಿನ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನೊಂದವರು ಹಾಗೂ ಹಸಿದವರಿಗೆ ಸಹಾಯಕವಾಗಲಿ ಎನ್ನುವ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟನಾರಾಯಣ ಮೀರಿಯಂ, ಸಹಕಾರ ನೋಂದಣಿ ಇಲಾಖೆ ತಾಲ್ಲೂಕು ಅಧಿಕಾರಿ ಮಲ್ಲಯ್ಯ ಕಂದಾ, ಪತ್ರಕರ್ತ ಅಮರೇಶ ಅಲಬನೂರು, ಶರಣಪ್ಪ ಹೊಸಳ್ಳಿ, ಡಾ.ಹುಸೇನಪ್ಪ ಅಮರಾಪುರ, ರವಿ ಮಲ್ಲಾಪುರ, ಗಣೇಶ ಬಂಗಾರಿಕ್ಯಾಂಪ್, ಶಿವು ಯಮನೂರಪ್ಪ, ನಿರುಪಾದಿ ಸಾಸಲಮರಿ, ಮಲ್ಲಿಕಾರ್ಜುನ ಸುರಪುರ, ಬೀರಪ್ಪ ಗುಂಜಳ್ಳಿ ಹಾಗೂ ನಿಂಗಪ್ಪ ಗವಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT