ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ವಿಶಿಷ್ಟ ಕನ್ನಡಾಭಿಮಾನಿ

ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ: ನಿತ್ಯವೂ ರಾಜ್ಯೋತ್ಸವ
Last Updated 29 ನವೆಂಬರ್ 2019, 10:14 IST
ಅಕ್ಷರ ಗಾತ್ರ

ರಾಯಚೂರು: ವರ್ಷದುದ್ದಕ್ಕೂ ಕನ್ನಡ ಭಾಷೆಯಜಾಗೃತಿ ಹಾಗೂ ಕನ್ನಡಾಂಬೆಯನ್ನು ನಿತ್ಯ ಪೂಜಿಸುತ್ತಿರುವ ನರಸಿಂಹ ಅವರು ವಿಶಿಷ್ಟ ರೀತಿಯಲ್ಲಿ ಕನ್ನಾಡಾಭಿಮಾನವನ್ನು ಮೆರೆಯುತ್ತಿದ್ದಾರೆ.

ತನು, ಮನದಲ್ಲಿ ಕನ್ನಡಾಭಿಮಾನ ತುಂಬಿಕೊಂಡಿದ್ದಾರೆ. 8ನೇ ತರಗತಿಯಿಂದ ಕನ್ನಡದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದು, ಪಿಯುಸಿವರೆಗೂ ಶಿಕ್ಷಣ ಆಗಿದೆ. 2001 ರಿಂದ ಕಾಲೇಜಿಗೆ ಹೋಗುವುದನ್ನು ಕೈಬಿಟ್ಟರು. ಅಮರಖೇಡ ಲೇಔಟ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ಸಣ್ಣ ಕಿರಾಣಿ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕನ್ನಡತನ ಹಾಗೂ ಕನ್ನಡ ಭಾಷಾಭಿಮಾನ ಕೇವಲ ಬಾಯಿ ಮಾತಿನಲ್ಲಿ ಇಟ್ಟುಕೊಂಡಿಲ್ಲ. ನಡೆ, ನುಡಿಗಳಲ್ಲಿ ಎರಡರಲ್ಲೂ ಕನ್ನಡವಿದೆ. ನರಸಿಂಹ ಅವರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅಭಿಮಾನ ಭಾವ ಜಾಗೃತವಾಗುತ್ತದೆ. ಅವರ ಭಾಷಾಭಿಮಾನ ಕಂಡು ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತವೆ.

ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಲು ಸಿದ್ಧಪಡಿಸುವ ರೀತಿಯ ವಾತಾವರಣವು ನರಸಿಂಹ ಕಿರಾಣಿ ಅಂಗಡಿಯಲ್ಲಿ ನಿತ್ಯವೂ ಕಂಡು ಬರುತ್ತದೆ. ಸುತ್ತಮುತ್ತಲೂ ಹತ್ತಾರು ಕನ್ನಡದ ಧ್ವಜಗಳು ರಾರಾಜಿಸುತ್ತಿವೆ. ‘ಕನ್ನಡವೇ ಸತ್ಯ’ ಎನ್ನುವ ಫಲಕವಿದೆ. ಕನ್ನಡ ಹಬ್ಬದ ಸಡಗರ ತುಂಬಿದ್ದು, ಮಾರ್ಗದಲ್ಲಿ ಸಂಚರಿಸುವವರ ಗಮನ ಸೆಳೆಯುತ್ತದೆ. ಈ ರೀತಿ 15 ವರ್ಷಗಳಿಂದ ಸಂಭ್ರಮ ಮುಂದುವರಿಸಿಕೊಂಡು ಬಂದಿದ್ದಾರೆ.

ಅಂಗಡಿಯಲ್ಲಿರುವ ಕನ್ನಡಾಂಭೆಯ ಭಾವಚಿತ್ರವು ವಿಶೇಷತೆಯಿಂದ ಕೂಡಿದೆ. ಭುವನೇಶ್ವರಿದೇವಿಯು ರಥಾರೂಢಳಾಗಿದ್ದು, ವರನಟ ಡಾ.ರಾಜಕುಮಾರ್‌ ಅವರು ಸಾರಥಿಯಾಗಿ ಪಂಚ ಕುದುರೆಗಳ ರಥವನ್ನು ಮುನ್ನಡೆಸುತ್ತಿರುವ ಭಾವಚಿತ್ರವಿದೆ. ನಿತ್ಯವೂ ಇದಕ್ಕೆ ಪೂಜೆ ಸಲ್ಲುತ್ತದೆ.

ನರಸಿಂಹ ಅವರು ಕಿರಾಣಿ ಸಂತೆಗಾಗಿ ಮಾರುಕಟ್ಟೆಗೆ ಹೋಗಿ ಬರುವುದು ಕೂಡಾ ವಿಶೇಷತೆ ಇದೆ. ಅವರು ಬರೀ ಸಂತೆಗಾಗಿ ಹೋಗುವುದಿಲ್ಲ, ಕನ್ನಡ ಪ್ರಚಾರವನ್ನೂ ಮಾಡುತ್ತಾರೆ. ಸೈಕಲ್‌ ಮುಂಭಾಗದಲ್ಲಿ ಕನ್ನಡ ಧ್ವಜ ಯಾವಾಗಲೂ ತಲೆ ಎತ್ತಿಕೊಂಡಿರುತ್ತದೆ. ಇನ್ನೊಂದು ಸ್ಕೂಟಿ ಇದ್ದು, ಅದರಲ್ಲೂ ಕನ್ನಡವೇ ಇದೆ. ಪ್ರತಿನಿತ್ಯ ಕನ್ನಡತನವನ್ನು ಜಾಗೃತಿ ಮಾಡುತ್ತಲೇ ಬಂದಿದ್ದಾರೆ. ನರಸಿಂಹ ಅವರ ಕನ್ನಡಾಭಿಮಾನ ಮೆಚ್ಚಿಕೊಂಡು ಸುತ್ತಮುತ್ತ ಬಡಾವಣೆಗಳ ಅನೇಕ ಸುಶಿಕ್ಷಿತರು ಸ್ನೇಹ ಬೆಳೆಸಿಕೊಂಡು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ರಾಜ್ಯೋತ್ಸವ ಎಂದರೆ ವರ್ಷಕ್ಕೊಮ್ಮೆ ಕನ್ನಡಧ್ವಜ ಹಾರಿಸಿ ಕೈಬಿಡುವುದಲ್ಲ. ಕನ್ನಡವು ಮೈ ಮನಗಳಲ್ಲಿ ತುಂಬಿರಬೇಕು. ಕನ್ನಡವನ್ನು ಎಲ್ಲರೂ ಬೆಳೆಸಬೇಕಿದೆ. ಕಳೆದ 15 ವರ್ಷಗಳಿಂದ ನರಸಿಂಹ ಅವರನ್ನು ನೋಡುತ್ತಿದ್ದೇನೆ. ಅನುಸರಿಸಿಕೊಂಡು ಬಂದ ಕನ್ನಡತನದ ಶಿಸ್ತನ್ನು ನೋಡಿದ್ದೇನೆ. ಅವರ ಭಾಷಾಭಿಮಾನ ಮಾದರಿಯಾಗಿದೆ’ ಎನ್ನುತ್ತಾರೆ ಎಲ್‌ವಿಡಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಮೇಶ ಎಚ್‌. ಮೇರವಾಡೆ ಅವರು.

ಮಾಣಿಕನಗರದಲ್ಲಿ ಮನೆ ಕಟ್ಟಿಕೊಂಡಿರುವ ನರಸಿಂಹಲು ಅವರು ತಿಮ್ಮಾಪುರಪೇಟ ಬಡಾವಣೆಯ ಕನ್ನಡ ಸಂಘದಲ್ಲಿ ಸಕ್ರಿಯರಾಗಿದ್ದಾರೆ.

‘ಕನ್ನಡಾಭಿಮಾನ ನನಗಿಂತಲೂ ನಮ್ಮ ಗೆಳೆಯರಲ್ಲಿ ತುಂಬಾ ಇದೆ. ಡಾ. ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ ನಾನು. ಅವರ ಸಿನಿಮಾ ನೋಡಿ ಕನ್ನಡದ ಬಗ್ಗೆ ಪ್ರೀತಿ ಹೆಚ್ಚಾಯಿತು. ಅವರು ಮಾಡಿದ ಗೋಕಾಕ ಚಳವಳಿ ಬಗ್ಗೆ ತಿಳಿದುಕೊಂಡಿದ್ದೇನೆ. ಕನ್ನಡ ಉಳಿಸಲು, ಬೆಳೆಸಲು ನಡೆಯುವ ಪ್ರತಿ ಹೋರಾಟಗಳಲ್ಲಿ ಮಾತ್ರ ನಾನು ಈಗಲೂ ಪಾಲ್ಗೊಳ್ಳುತ್ತೇನೆ. ಸ್ನೇಹಿತರಾದ ಗುರುರಾಜ ಜಿ.ಕೆ., ರಾಮು, ನಾಗಪ್ಪ ಸೇರಿದಂತೆ ಅನೇಕ ಸ್ನೇಹಿತರು ಕನ್ನಡದ ಬಗ್ಗೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದಾರೆ’ ಎಂದು ನರಸಿಂಹ ವಿವರಿಸಿದರು.

‘ನನ್ನ ಕನ್ನಡದ ಅಭಿಮಾನವನ್ನು ಕುಟುಂಬದ ಸದಸ್ಯರೆಲ್ಲರೂ ಬೆಂಬಲಿಸುತ್ತಿದ್ದಾರೆ. ನನಗೆ ಯಾವುದೇ ಪ್ರಚಾರ ಬೇಡ. ಕನ್ನಡ ಉಳಿಸಬೇಕು, ಬೆಳೆಸಬೇಕು. ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ, ಆದರೆ ಕನ್ನಡ ಭಾಷೆ ಮರೆಯುವುದು ತಪ್ಪು. ಮನೆಗಳಲ್ಲಿ ಕನ್ನಡ ಮಾತನಾಡಬೇಕು’ ಎನ್ನುವುದು ಅವರ ಅಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT