ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಗ್ರಾಮ ಪಂಚಾಯಿತಿಗೆ ಜವಾಬ್ದಾರಿ ಹೆಚ್ಚು

ಕೇಂದ್ರ ವಿಶೇಷ ತಂಡದ ಸಂಶೋಧಕ ಟಿ.ವಿ.ತಿಲಖಾನ್ ಹೇಳಿಕೆ
Last Updated 13 ಮೇ 2022, 14:11 IST
ಅಕ್ಷರ ಗಾತ್ರ

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಬಾಕಿ ಕಾಮಗಾರಿಯನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ವಿಶೇಷ ತಂಡದ ಸಂಶೋಧಕ ಟಿ.ವಿ. ತಿಲಖಾನ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನರೇಗಾ ಹಾಗೂ ಪಿಎಂಜಿಎಸ್‌ವೈ ಯೋಜನೆ ಅನುಷ್ಠಾನಗೊಳಿಸುವ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದ ರಾಷ್ಟ್ರೀಯ ಹಂತದ ನಿಗಾ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ನರೇಗಾ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಈ ಯೋಜನೆಯಿಂದ ವಂಚಿತರಾಗದಂತೆ ಆಯಾ ಗ್ರಾಮ ಪಂಚಾಯತಿಗಳು ಕೂಲಿ ಕಾರ್ಮಿಕರಿಗೆ ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಕೆಲಸ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೃಷಿ ಹೊಂಡ, ಬದು ನಿರ್ಮಾಣ, ಕೆರೆ, ಶಾಲಾ ಕಂಪೌಂಡ್‌, ಶೌಚಾಲಯ ಹಾಗೂ ಕುಡಿಯುವ ನೀರು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು..

ಜಿಲ್ಲೆಯ 179 ಗ್ರಾಮ ಪಂಚಾಯಿಗಳಲ್ಲಿ ನರೇಗಾ ಸಮರ್ಪಕವಾಗಿ ಅನುಷ್ಠಾನವಾಗಬೇಕಾಗಿದೆ. ಕೇಂದ್ರದ ಮಹತ್ವಕಾಂಕ್ಷಿ ಯೋಜನೆಯಡಿ ಜಿಲ್ಲೆಯು ಆಯ್ಕೆ ಆಗಿರುವುದರಿಂದ ಈ ಭಾಗದಲ್ಲಿ ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿ ಅವರು ವಾಸ ಮಾಡುವ ಸ್ಥಳದಲ್ಲಿಯೇ ಕೆಲಸ ನೀಡಬೇಕು ಎಂದರು.

ಪಿ.ಎಂ.ಜಿ.ಎಸ್.ವೈ ಯೋಜನೆಯಡಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡಬೇಕು. ಹೆದ್ದಾರಿಗಳಲ್ಲಿ ಹಸಿರೀಕರಣದಿಂದ ಪ್ರಯಾಣಿಕರಿಗೆ ಶುದ್ಧ ಗಾಳಿ ಸಿಗುವಂತಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಡೋಳಪ್ಪ ಪಿ.ಎಸ್. ಮಾತನಾಡಿ, ನರೇಗಾ ಯೋಜನೆಯಡಿ ಈಗಾಗಲೇ ಜಾಬ್ ಕಾರ್ಡ್ ಹೊಂದಿರುವವರಿಗೆ ಕೆಲಸ ನೀಡಲಾಗಿದೆ. ನರೇಗಾದಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿ.ಎಂ.ಜಿ.ಎಸ್.ವೈ ಎಂಜಿನಿಯರುಗಳು ಹಾಗೂ ಕಚೇರಿಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT