ಶನಿವಾರ, ಡಿಸೆಂಬರ್ 7, 2019
22 °C
ಜಾಗೃತಿ, ಶಿಕ್ಷಣಕ್ಕಾಗಿ ರಾಷ್ಟ್ರೀಯ ಪೋಷಣ್ ಅಭಿಯಾನ

ಅಪೌಷ್ಟಿಕತೆ ತೊಲಗಿಸುವುದು ಅಗತ್ಯ: ವೀರಲಕ್ಷ್ಮೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಗರ್ಭಿಣಿಯರು ಹಾಗೂ ಮಕ್ಕಳಲ್ಲಿರುವ ಅಪೌಷ್ಟಿಕತೆ ತೊಲಗಿಸಿ ಜನಾಂದೋಲನದ ಮೂಲಕ ಜಾಗೃತಿ ಮೂಡಿಸಲು ರಾಷ್ಟ್ರೀಯ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಾದ್ಯಂತ ಈ ತಿಂಗಳುಪೂರ್ತಿ ಪೋಷಣ್‌ ಅಭಿಯಾನ ಮಾಸ ಆಚರಿಸಲಾಗುತ್ತಿದೆ. ಈ ಆಚರಣೆಯು ಜನಾಂದೋಲನ ಕಲ್ಪನೆಯ ಮೂಲಕ ಫಲಾನುಭವಿಗಳಿಗೆ ಅಷ್ಟೇ ಅಲ್ಲದೆ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತು ಜಾಗೃತಿ ಹಾಗೂ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೌಷ್ಟಿಕತೆಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ. ಮುಖ್ಯವಾಗಿ ಮುಂದಿನ ಮೂರು ವರ್ಷಗಳಲ್ಲಿ ಆರು ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿಯನ್ನು ನಿರ್ಧಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 2017–18ಕ್ಕೆ ಪ್ರಾರಂಭವಾಗಿರುವ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ರ ಮಾರ್ಚ್ 8 ರಂದು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಫಲಾನುಭವಿಗಳಾದ ಆರು ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರ ಆರೋಗ್ಯ ಹಾಗೂ ಪೌಷ್ಟಿಕತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಪೋಷಣ್ ಅಭಿಯಾನವು ಸಂಪೂರ್ಣ ದೇಶದಲ್ಲಿ ಆರಂಭಗೊಂಡಿದ್ದು, ಜಿಲ್ಲಾ ದೃಷ್ಟಿಯಿಂದ ಅತಿ ಪ್ರಮುಖ ಕಾರ್ಯಕ್ರಮವಾಗಿದೆ ಎಂದರು.

ಈ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಗಣನೀಯವಾಗಿದ್ದು, ಪೌಷ್ಟಿಕ ಆಹಾರ ಸೇವಿಸುವ ಬಗ್ಗೆ ಗರ್ಭಿಣಿಯರಿಗೆ ತಿಳಿಸಿಕೊಡಬೇಕು. ಅದರೊಂದಿಗೆ ಸ್ವಚ್ಛತೆ ಸೇರಿದಂತೆ ಕೈತೊಳೆಯುವ ವಿಧಾನಗಳನ್ನು ತಿಳಿಸಿಕೊಡಬೇಕು. ಅದರೊಂದಿಗೆ ಮಕ್ಕಳಿಗೆ ಸಣ್ಣಪುಟ್ಟ ಖಾಯಿಲೆಗಳಿದ್ದರೆ ಅವುಗಳನ್ನು ಗುರುತಿಸಿ ತಾಲ್ಲೂಕು ಆಸ್ಪತ್ರೆಯ ಎನ್‌ಆರ್‌ಸಿಗಳಲ್ಲಿ ನೋಂದಣಿ ಮಾಡಿಸಬೇಕು. ಆ ಮೂಲಕ ಆಪೌಷ್ಟಿಕತೆಯಿಂದ ಹೊರಬರಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಗರ್ಭಿಣಿಯರಿಗೆ ಆಹಾರದೊಂದಿಗೆ ಪ್ರತಿನಿತ್ಯ ಒಂದು ಸೇಬು ನೀಡಿದರೆ ಮತ್ತಷ್ಟು ಪೌಷ್ಟಿಕಾಂಶಗಳು ವೃದ್ಧಿಯಾಗುತ್ತವೆ. ಈ ದಿಸೆಯಲ್ಲಿ ಸಂಬಂಧಿಸಿದ ಇಲಾಖೆ ಚಿಂತಿಸಬೇಕಿದೆ. ಸಾಧ್ಯವಾದಷ್ಟು ಬೆಲ್ಲದ ಸೇವನೆ ಹೆಚ್ಚಿಸಿಕೊಳ್ಳಬೇಕು. ತರಕಾರಿಗಳಲ್ಲಿ ಅಗಾಧ ಪ್ರಮಾಣದ ಪೌಷ್ಟಿಕಾಂಶಗಳಿದ್ದು, ಯಥೇಚ್ಚಾವಾಗಿ ಬಳಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀರನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ವಿಜಯಲಕ್ಷ್ಮೀ ಇದ್ದರು.

ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಿಕರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ನೂರಕ್ಕೂ ಹೆಚ್ಚಿನ ಗರ್ಭೀಣಿಯರಿಗೆ ಸೀಮಂತ ಕಾರ್ಯ ನಿರ್ವಹಿಸಿದರು. ಗರ್ಭೀಣಿಯರಿಗೆ ಬಳೆ ಹಾಗೂ ಮಂಗಳಕರ ಸಾಮಗ್ರಿಗಳನ್ನು ವಿತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು