ಮಂಗಳವಾರ, ಡಿಸೆಂಬರ್ 10, 2019
19 °C

ದೌರ್ಜನ್ಯ ತಡೆಯಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ತಡೆಯುವಂತೆ ನವ ಜೀವನ ಮಹಿಳಾ ಒಕ್ಕೂಟವು ಮಂಗಳವಾರ ಧರಣಿ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಕುಳಿತು ಪ್ರತಿಭಟಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಏಳು ವರ್ಷಗಳ ಹಿಂದೆ ನಡೆದಿದ್ದ ನಿರ್ಭಯ ಪ್ರಕರಣದಷ್ಟೇ ಪೈಶಾಚಿಕ ಕೃತ್ಯ ಮತ್ತೆ ಹೈದ್ರಾಬಾದಿನಲ್ಲಿ ನಡೆದಿದೆ. ಪಶುವೈದ್ಯೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಸುಟ್ಟು ಕೊಲೆ ಮಾಡಿರುವುದು ಹೇಯ ಕೃತ್ಯ. ಇಂತಹ ಕೃತ್ಯಗಳಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಯುವ ಜನತೆಯಲ್ಲಿ ಮಹಿಳೆಯರಿಗೆ ರಕ್ಷಣೆ, ಗೌರವದಿಂದ ಕಾಣುವಂತೆ ಜಾಗೃತಿ ಮೂಡಿಸಬೇಕಿದೆ ಎಂದರು.

ಈ ಕೃತ್ಯಕ್ಕೆ ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ವಿಳಂಬವಾದರೆ ದೇಶಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ವಿದ್ಯಾ ಪಾಟೀಲ, ಮೋಕ್ಷಮ್ಮ, ಮಾಳಮ್ಮ, ಜ್ಯೋತಿ, ಪಲ್ಲವಿ, ಸುನಂದಮ್ಮ, ಹನುಮೇಶ ಇದ್ದರು.

ಪ್ರತಿಕ್ರಿಯಿಸಿ (+)