ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹2.55 ಕೋಟಿ ಮೌಲ್ಯದ 7 ಕೆ.ಜಿ ಚಿನ್ನಾಭರಣ ವಶ

Last Updated 9 ಏಪ್ರಿಲ್ 2018, 11:49 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಕಡಬಗಟ್ಟಿ ಬಳಿ ಗೋವಾದಿಂದ ಹುಬ್ಬಳ್ಳಿಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹2.55 ಕೋಟಿ ಮೌಲ್ಯದ 7.722 ಕೆ.ಜಿ. ಚಿನ್ನಾಭರಣಗಳನ್ನು ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿ ಜಿಲ್ಲಾ ಅಂತರಜಲ ಭೂವಿಜ್ಞಾನಿ ರಾಜಶೇಖರ ರೆಡ್ಡಿ ಅವರು ಈ ಕುರಿತು ಅಳ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಚುನಾವಣೆಯ ಸಮಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಈ ಆಭರಣಗಳನ್ನು ಸಾಗಿಸಲಾಗುತ್ತಿತ್ತು. ಕಡಬಗಟ್ಟಿ ಕ್ರಾಸ್‌ ಬಳಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ಕಾರನ್ನು ತಡೆದು ತಪಾಸಣೆ ಮಾಡಿದಾಗ ಅಪಾರ ಪ್ರಮಾಣದ ಆಭರಣಗಳು ಇರುವುದು ಪತ್ತೆಯಾಗಿವೆ’ ಎಂದು ದೂರಿನಲ್ಲಿ ಹೇಳಲಾಗಿದೆ.

ಗೋವಾದ ಪಿ.ಕೆ. ಆಭರಣ ಅಂಗಡಿಯ ಮಾಲೀಕ ಪ್ರತೀಕ ನಾರ್ವೇಕರ್‌ ಹಾಗೂ ರಾಜಸ್ಥಾನ ಮೂಲದ ವಿಕ್ರಮಸಿಂಗ್ ರಾಥೋಡ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಮ್ಮ ಕಾರಿನಲ್ಲಿ 44 ಬಳೆಗಳಿರುವ 4 ಬಾಕ್ಸ್‌ ಮತ್ತು ತಲಾ 10 ಮಂಗಳಸೂತ್ರಗಳಿರುವ ಮೂರು ಬಾಕ್ಸ್‌ಗಳನ್ನು ತೆಗೆದುಕೊಂಡು ಹುಬ್ಬಳ್ಳಿ ಕಡೆ ಬರುತ್ತಿದ್ದರು.

‘ಆಭರಣ ಯಾರಿಗಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನುವುದರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಮ್ಮೆ ಮುಂಬೈನಿಂದ ಬಂದ ಉದ್ಯಮಿಗೆ ನೀಡಲಾಗುತ್ತಿತ್ತು. ಮತ್ತೊಮ್ಮೆ ಹುಬ್ಬಳ್ಳಿ ತಲುಪುತ್ತಿದ್ದಂತೆ ಕರೆ ಬರುತ್ತದೆ. ಅವರಿಗೆ ನೀಡಬೇಕು ಎಂದೆನ್ನುತ್ತಿದ್ದಾರೆ, ಮಗದೊಮ್ಮೆ ಆಭರಣ ಮಳಿಗೆಗೆ ನೀಡಲು ಹೋಗುತ್ತಿದ್ದೆವು ಎಂದೆನ್ನುತ್ತಿದ್ದಾರೆ. ಹೀಗಾಗಿ ಸಂಪೂರ್ಣ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು.

ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ ಅವರ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಪ್ರಶಾಂತ ನಾಯಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT