ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಂಪೆನಿ ಮಾರಾಟ ವಿರುದ್ಧ ಹೋರಾಟ ಅನಿವಾರ್ಯ: ಅಮಾನುಲ್ಲಾ ಖಾನ್‌ ಹೇಳಿಕೆ

ವಿಮಾ ನೌಕರರ ಜಿಲ್ಲಾಮಟ್ಟದ ಸಮಾವೇಶ
Last Updated 27 ನವೆಂಬರ್ 2021, 14:40 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಿ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಮೂಲಕ ದೇಶದ ಆಸ್ತಿಯನ್ನು ಲೂಟಿ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಸರ್ಕಾರಿ ಸ್ವಾಮ್ಯದ ಸಂಸ್ಥೆ ಉಳಿಯದೇ ಉದ್ಯಮಿಗಳ ಪಾಲಾಗುವುದು ಖಚಿತ. ಸಂಘಟನಾತ್ಮಕ ಹೋರಾಟ ಅನಿವಾರ್ವಾವಾಗಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಹೇಳಿದರು.

ನಗರದ ಎಲ್ಐಸಿ ಕಚೇರಿ ಆವರಣದಲ್ಲಿ ವಿಮಾ ನೌಕರರ ಒಕ್ಕೂಟ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ’ರಾಷ್ಟ್ರೀಯ ಆಸ್ತಿ ಹಣಗಳಿಕೆ ಮತ್ತು ಸರ್ಕಾರಿ ಕಂಪನಿಗಳ ಖಾಸಗೀಕರಣ’ ವಿಷಯದ ಕುರಿತು ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

ಸರ್ಕಾರ ಬಿಎಸ್ಎನ್ಎಲ್, ಎಲ್ಐಸಿ, ಏರ್ ಇಂಡಿಯಾ, ರೈಲ್ವೆ ಸೇರಿ ಇತರೆ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಯುಪಿಯ ಅಧಿಕಾರದಲ್ಲಿದ್ದಾಗ ಖಾಸಗೀಕರಣಕ್ಕೆ ವಿರೋಧಿಸಿದ್ದ ಬಿಜೆಪಿ ಈಗ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಉದ್ಯಮಿಗಳ ಪಾಲಿಗೆ ನೀಡುತ್ತಿದೆ. ದೇಶದ ಜನರಿಗೆ ಈ ಸಂಸ್ಥೆಗಳ ಮೂಲಕ ಸೇವೆ ನೀಡಬೇಕಿದೆ. ಆದರೆ ಸರ್ಕಾರ ಲಾಭದಾಯಕವಾಗಿಲ್ಲ ಎಂದು ನೆಪ ಹೇಳಿ ಮಾರಾಟ ಮಾಡುತ್ತಿದೆ ಎಂದು ದೂರಿದರು.

ಸರ್ಕಾರ ರೈತ, ಕಾರ್ಮಿಕ, ಜನವಿರೋಧಿ ನೀತಿ ಅನುಸರಿಸುತ್ತಿದೆ. ಬ್ಯಾಂಕುಗಳ ವಿಲೀನಕರಣಗೊಳಿಸಿ ಬ್ಯಾಂಕುಗಳ ಸ್ಥಾಪನೆಯ ಉದ್ದೇಶ ತಲೆ ಕೆಳಗಾಗುವಂತೆ ಮಾಡಿದೆ. ನೀರು, ಗಾಳಿ ಇತರೆ ನೈಸರ್ಗಿಕ ಸಂಪನ್ಮೂಲ ಸಾರ್ವಜನಿಕ ಆಸ್ತಿ. ಇದರ ಮೇಲೆ ನಾಗರಿಕರ ಹಕ್ಕಿದೆ ಎಂದು ಸಂವಿಧಾನ ಹೇಳಿದೆ. ಆದರೆ ಸರ್ಕಾರದ ನೀತಿಯಿಂದಾಗಿ ಇವೆಲ್ಲ ಉದ್ಯಮಿಗಳ ವ್ಯಾಪಾರದ ವಸ್ತುವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದಿ ಚಿತ್ರನಟಿ ಕಂಗನಾ ರನೌತ್, ಸ್ವಾತಂತ್ರ್ಯ ನಮಗೆ ಭಿಕ್ಷೆಯಾಗಿ ಸಿಕ್ಕಿದೆ ಎಂದು ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರದ ವಿರುದ್ಧ ಮಾತನಾಡಿದವರಿಗೆ ದೇಶದ್ರೋಹಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

ವಿಮಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ರವಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರಕ್ಕೆ ಸೇವೆಗಿಂತ ಲಾಭವೇ ಮುಖ್ಯವಾಗಿದೆ. ಹೀಗೆ ಮುಂದುವರೆದರೆ ದೇಶ ದಿವಾಳಿಯಾಗುವುದು ಖಚಿತ ಎಂದು ಹೇಳಿದರು.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಸಲಾವುದ್ದೀನ್, ವಿಮಾ ನೌಕರರ ಸಂಘದ ಹುಬ್ಬಳ್ಳಿ–ಧಾರವಾಡ ವಿಭಾಗೀಯ ಉಪಾಧ್ಯಕ್ಷ ಮೃತ್ಯಂಜಯ, ಬಿಎಸ್ಎನ್ಎಲ್ ನೌಕರ ಸಂಘದ ಮುಖಂಡ ವಿ.ಎಂ ಉಕ್ಲಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಖಂಡ ಡಿ.ಬಿ.ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಗುರುರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT