ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ನಿರಂತರ ನೀರು ಪೂರೈಸುವ ಯೋಜನೆಗೆ ಹೊಸ ಗಡುವು

ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಕ್ಷ ಆಡಳಿತದ ಕೊರತೆ
Last Updated 27 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಡಿ ಕೈಗೊಂಡಿರುವ ಕುಡಿಯುವ ನೀರು ಪೂರೈಸುವ ಯೋಜನೆಗಳೆಲ್ಲ ಗುತ್ತಿಗೆ ಗಡುವು ಮುಗಿದಿದ್ದರೂ ಕಾಮಗಾರಿ ಸಂಪೂರ್ಣವಾಗುತ್ತಿಲ್ಲ.

ಮುಖ್ಯವಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ)ದ ಮೂಲಕ ರಾಯಚೂರು, ಸಿಂಧನೂರು, ಮಾನ್ವಿ ಹಾಗೂ ಮುದಗಲ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ನೂರಾರು ಕೋಟಿ ಅನುದಾನ ವೆಚ್ಚವಾಗಿದೆ. ಆದರೆ, ಸಾಧನೆ ಕಾಣುತ್ತಿಲ್ಲ. ಕಾಮಗಾರಿ ಮುಗಿಸುವುದಕ್ಕೆ ಅಂತಿಮ ಅವಧಿ ವಿಸ್ತರಿಸುತ್ತಾ ಬರಲಾಗುತ್ತಿದೆ. 24/7 ನಿರಂತರ ನೀರು ಪೂರೈಸುವ ಯೋಜನೆಗಳಿಗಾಗಿ ನೂರಾರು ಕೋಟಿ ಅನುದಾನ ಮೀಸಲು ಇಟ್ಟಿರುವುದು ಜನರಿಗೆ ಅನುಕೂಲವಾಗುತ್ತಿಲ್ಲ.

ರಾಯಚೂರು ನಗರದಲ್ಲಿ 24/7 ನೀರು ಪೂರೈಸುವ ಯೋಜನೆಗಾಗಿ ಎನ್‌ಕೆಯುಎಸ್‌ಐಪಿ ಯೋಜನೆಯಡಿ ₹96 ಕೋಟಿ, ನೀರು ಪೂರೈಸುವ ವ್ಯವಸ್ಥೆಯ ಸುಧಾರಣೆಗಾಗಿ ₹57 ಕೋಟಿ ಅನುದಾನ ಒದಗಿಸಲಾಗಿದೆ. ಸಿಂಧನೂರಿನಲ್ಲಿ 24/7 ಕುಡಿಯುವ ನೀರು ಪೂರೈಕೆಗಾಗಿ ₹99 ಕೋಟಿ ಅನುದಾನ ಬಂದಿದೆ. ಮುದಗಲ್‌ ಪುರಸಭೆಯಡಿ ಕುಡಿಯುವ ನೀರಿನ ವ್ಯವಸ್ಥೆಯ ಸುಧಾರಣೆಗಾಗಿ ₹31 ಕೋಟಿ ಅನುದಾನ ಕೊಡಲಾಗಿದೆ. ಕಾಮಗಾರಿಗಳನ್ನು ಗುತ್ತಿಗೆ ವಹಿಸಿ ವರ್ಷಗಳು ಉರುಳುತ್ತಿವೆ. ಗಡುವು ವಿಸ್ತರಣೆ ಆಗುತ್ತಿದ್ದು, ಕನಿಷ್ಠ ಪ್ರಾಯೋಗಿಕ ಹಂತದಲ್ಲೂ ನೀರು ಪೂರೈಕೆ ಯಶಸ್ವಿಯಾಗುತ್ತಿಲ್ಲ. ನೂರಾರು ಕೋಟಿ ಅನುದಾನವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಮಣ್ಣುಪಾಲು ಮಾಡಿದ್ದಾರೆ ಎಂದು ಜನರು ಆರೋಪಿ ಆರೋಪಿಸುತ್ತಿದ್ದಾರೆ.

ರಾಯಚೂರು ನಗರದಲ್ಲಿ ನಿರಂತರ ನೀರಿನ ಕಾಮಗಾರಿಯನ್ನು 2015 ಫೆಬ್ರವರಿಯಲ್ಲಿ ನವದೆಹಲಿಯ ಮೆಸ್‌ ಎಸ್‌ಪಿಎಂಎಲ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಕಂಪೆನಿಗೆ ವಹಿಸಲಾಗಿದೆ. 2017 ರ ಆಗಸ್ಟ್‌ನಲ್ಲಿ ಕಾಮಗಾರಿ ಮುಗಿಸುವುದಕ್ಕೆ ಗಡುವು ನೀಡಲಾಗಿತ್ತು. ಇದುವರೆಗೂ ಏಳು ಬಾರಿ ಗಡುವು ವಿಸ್ತರಿಸಲಾಗಿದೆ. 2020 ರ ನವೆಂಬರ್‌ನಲ್ಲಿ ಕಾಮಗಾರಿ ಮುಗಿಸಲು ಹೊಸ ಗಡುವು ವಿಧಿಸಲಾಗಿದೆ. ಇದುವರೆಗೂ ಶೇ 89 ರಷ್ಟು ಕಾಮಗಾರಿ ಮುಗಿಸಿರುವ ಕಂಪೆನಿಯು, ಬಾಕಿ ಕೆಲಸ ಮಾಡುವುದಕ್ಕೆ ಅನಾದರ ತೋರಿಸುತ್ತಿದೆ. ನದಿಯಿಂದ ನೀರು ತರುವುದಕ್ಕೆ ಪೈಪ್‌ಲೈನ್‌ ಅಳವಡಿಕೆ ಮುಕ್ತಾಯವಾಗಿದ್ದು, ಅಲ್ಲಿಂದ ವಿತರಿಸುವ ಪೈಪ್‌ಲೈನ್‌ ಇನ್ನೂ ಮುಗಿದಿಲ್ಲ.

ಸಿಂಧನೂರು ನಗರದ ಕುಡಿಯುವ ನೀರಿನ ಕಾಮಗಾರಿಯನ್ನು ಕೂಡಾ ಎಸ್‌ಪಿಎಂಎಲ್‌ ಇನ್‌ಫ್ರಾ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಇದುವರೆಗೂ ಶೇ 97 ರಷ್ಟು ಕಾಮಗಾರಿ ಮುಗಿದಿದ್ದರೂ ಮನೆಮನೆಗೂ ನಿರಂತರ ಪೂರೈಸುವುದಕ್ಕೆ ಸಾಧ್ಯವಾಗಿಲ್ಲ. 2014 ರ ಡಿಸೆಂಬರ್‌ನಿಂದ ಕಾಮಗಾರಿ ಪ್ರಾರಂಭಿಸಿದ್ದು, 2017 ರ ಜೂನ್‌ನಲ್ಲಿ ಮುಕ್ತಾಯವಾಗಬೇಕಿತ್ತು. ಆರು ಬಾರಿ ಗಡುವು ವಿಸ್ತರಿಸಿದ್ದು, ಇದೀಗ 2020 ರ ನವೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.

ಮುದಗಲ್‌ ಪಟ್ಟಣದಲ್ಲಿ ನೀರು ಪೂರೈಸುವ ವ್ಯವಸ್ಥೆ ಸುಧಾರಣೆ ಕಾಮಗಾರಿಯನ್ನು 2018 ರ ಮಾರ್ಚ್‌ನಲ್ಲಿ ಹೈದರಾಬಾದ್‌ನ ಮೆಸ್‌ ಎಎಸ್‌ಆರ್‌ ಎಂಜಿನಿಯರಿಂಗ್‌ ಆ್ಯಂಡ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಕಂಪೆನಿಗೆ ವಹಿಸಲಾಗಿದೆ. 18 ತಿಂಗಳುಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು. ಒಂದು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT