ಮಂಗಳವಾರ, ನವೆಂಬರ್ 30, 2021
21 °C
ಸ್ಯಾನಿಟೈಜರ್‌ ಬಳಸಿ, ಮಾಸ್ಕ್‌ ಧರಿಸಿ ದಿನಪತ್ರಿಕೆ ಹಂಚುವ ಏಜೆಂಟರು

ರಾಯಚೂರು: ಸೋಂಕಿನ ಸವಾಲಿನಲ್ಲೂ ಮನೆಮನೆಗೆ ಮಾಹಿತಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ರಾಯಚೂರು: ಪ್ರತಿದಿನ ಮನೆಮನೆಗೆ ದಿನಪತ್ರಿಕೆಗಳನ್ನು ತಪ್ಪದೇ ತಲುಪಿಸುವುದು ವೃತವಿದ್ದಂತೆ. ಕೊರೊನಾ ಮಹಾಮಾರಿ ಸಮಯದಲ್ಲಿ ಮಾರ್ಚ್‌ನಿಂದ ಜೂನ್‌ವರೆಗೂ ಲಾಕ್‌ಡೌನ್‌ ಇದ್ದರೂ ದಿನಪತ್ರಿಕೆ ವಿತರಿಸುವವರಿಗೆ ಹಾಗೂ ಹಂಚುವವರಿಗೆ ಬಿಡುವು ಇರಲಿಲ್ಲ. ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ‘ಕೊರೊನಾ ವಾರಿಯರ್ಸ್‌‘ ರೀತಿಯಲ್ಲೇ ಕೆಲಸ ಮಾಡಿದ್ದಾರೆ.

ನಸುಕಿನ ಸಕ್ಕರೆ ನಿದ್ರೆಯನ್ನು ಕಾಯಂ ತ್ಯಜಿಸುವ ಅನಿವಾರ್ಯತೆಯ ಉದ್ಯೋಗ ಇದು. ಸೂರ್ಯನ ಬಿಸಿಲು ಬಿರುಸಾಗುವ ಪೂರ್ವದಲ್ಲಿ ಮನೆಬಾಗಿಲಿಗೆ ಪತ್ರಿಕೆ ತಲುಪಿಸುವ ವೇಳೆ, ಅಪರೂಪಕ್ಕೊಮ್ಮೆ ಮನೆಯ ಯಜಮಾನತಿ, ಯಜಮಾನರ ಮುಖದರ್ಶನವಾದಾಗ ಹೊಮ್ಮುವ ಕಿರುನಗೆಯಲ್ಲೇ ಇವರು ಸಂತೋಷ ಕಾಣುವವರು. ಆಕಸ್ಮಿಕವಾಗಿ ಪತ್ರಿಕೆ ತಲುಪಿಸುವುದು ತಡವಾದಾಗ, ಮನೆಯವರ ಕಣ್ಣಿಗೆ ಬೀಳದಂತೆ ಸಂಚರಿಸುವ ಅನಿವಾರ್ಯತೆ ಇವರದ್ದು. ಇದೆಲ್ಲವೂ ಸಾಮಾನ್ಯ ದಿನಗಳಲ್ಲಿ ಕಾಣುತ್ತಿದ್ದ ಚಿತ್ರಣ. ಲಾಕ್‌ಡೌನ್‌ ಅವಧಿಯಲ್ಲಿ ವಿಭಿನ್ನ ರೀತಿಯ ಸಂಕಷ್ಟಗಳನ್ನು ಪತ್ರಿಕಾ ವಿತರಕರು ಎದುರಿಸಿದ್ದಾರೆ.

ಕೊರೊನಾ ಸೋಂಕಿನ ಆತಂಕ ಆವರಿಸಿಕೊಂಡಿದ್ದ ಲಾಕ್‌ಡೌನ್‌ ದಿನಗಳಲ್ಲಿ ದಿನಪತ್ರಿಕೆಗಳನ್ನು ಹಂಚುವುದು ದೊಡ್ಡ ಸವಾಲಾಗಿತ್ತು. ಪ್ರತಿ ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮೌನ ಆವರಿಸಿಕೊಂಡಿದ್ದಾಗ ಪತ್ರಿಕಾ ವಿತರಕರು, ಏಜೆಂಟರು ದೈರ್ಯದಿಂದ ಕೆಲಸ ಮಾಡಿದ್ದಾರೆ. ಸೋಂಕು ಹರಡದಂತೆ ಜಾಗೃತಿ ವಹಿಸಲು ಸರ್ಕಾರ, ವೈದ್ಯರು ನೀಡುವ ಸಲಹೆ, ಸೂಚನೆಗಳ ಕುರಿತು ಸವಿಸ್ತಾರ ಮಾಹಿತಿ ಇರುವ ದಿನಪತ್ರಿಕೆಗಳನ್ನು ಮನೆಮನೆಗೂ ತಲುಪಿಸಿದ್ದಾರೆ.

ತಪ್ಪುಗ್ರಹಿಕೆಯಿಂದ ಕೆಲವು ಜನರು ದಿನಪತ್ರಿಕೆ ಸ್ಪರ್ಶಿಸಲು ಹಿಂದೇಟು ಹಾಕಿದರು. ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು ಬಂದ್‌ ಆಗಿದ್ದರಿಂದ ಏಜೆಂಟರಿಗೆ ಬರಬೇಕಾದ ಬಿಲ್‌ ಈಗಲೂ ಬಾಕಿ ಉಳಿದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನರು ಕೂಡಾ ಸಕಾಲಕ್ಕೆ ಬಿಲ್‌ ಕೊಡಲು ಹಿಂದೇಟು ಹಾಕಿದಾಗ, ಏಜೆಂಟರು ಪತ್ರಿಕೆಗಳ ಮೂಲಕ ಮನವಿ ಮಾಡಿಕೊಂಡು ಬಿಲ್‌ ಪಡೆಯಬೇಕಾಯಿತು.

ಪ್ರತಿವರ್ಷ ಸೆಪ್ಟೆಂಬರ್‌ 4 ರಂದು ಪತ್ರಿಕಾ ವಿತರಕರ ದಿನಾಚರಣೆ ನಡೆಯುತ್ತದೆ. ಆದರೆ, ಏಜೆಂಟರು ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳು ಇದುವರೆಗೂ ಈಡೇರಿಲ್ಲ ಎನ್ನುವ ಅಸಮಾಧಾನ ಅವರಲ್ಲಿ ಮನೆಮಾಡಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪತ್ರಿಕಾ ವಿತರಕರ ನೆರವಿಗಾಗಿ ₹2 ಕೋಟಿ ಮೀಸಲಿಡಲಾಗುವುದು ಎಂದು ಘೋಷಿಸಲಾಗಿತ್ತು. ಅದರಿಂದ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಯಾವುದೇ ಕಾರ್ಯಕ್ರಮಗಳು ಪತ್ರಿಕಾ ವಿತರಕರಿಗಾಗಿ ಇದುವರೆಗೂ ಜಾರಿಗೊಳಿಸಿಲ್ಲ.

ಬೇಡಿಕೆಗಳು: ಪತ್ರಿಕಾ ವಿತರಕರು ಸಂಘಟಿತರಾಗಿಲ್ಲ. ಹೀಗಾಗಿ ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಮಾನ್ವಿ ತಾಲ್ಲೂಕು ಕೇಂದ್ರವೊಂದರಲ್ಲಿ ಏಕೈಕ ‘ಪತ್ರಿಕಾ ವಿತರಕರ ಸಂಘ’ ಅಸ್ತಿತ್ವಕ್ಕೆ ಬಂದಿದೆ.

‘ಪತ್ರಿಕೆ ಹಂಚುವ ಕೆಲಸಕ್ಕೆ ಉಳ್ಳವರು ಬರುವುದಿಲ್ಲ. ಎಲ್ಲರೂ ಬಡವರೇ ಇದ್ದಾರೆ. ಬಹಳಷ್ಟು ಜನರು ಸೈಕಲ್‌ ಮೇಲೆ ಪತ್ರಿಕೆ ವಿತರಿಸುತ್ತಿದ್ದು, ಅವರಿಗೆ ಜೀವವಿಮೆ ಸೌಲಭ್ಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಬೈಕ್‌ ಖರೀದಿಸಲು ಶೇ 50 ರಷ್ಟು ಸಹಾಯಧನ ಒದಗಿಸಬೇಕು. ಏಜೆಂಟರ್‌ ಕುಟುಂಬಗಳ ಆರೋಗ್ಯ ರಕ್ಷಣೆಗೆ ವಿಮೆ ಸೌಲಭ್ಯ ಕೊಡಬೇಕು’ ಎನ್ನುತ್ತಾರೆ ಮಾನ್ವಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಸನಗೌಡ ಮೇಟಿ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು