ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯಲ್ಲಿ ಒಂಭತ್ತು 'ನಮ್ಮ ಕ್ಲಿನಿಕ್' ಶೀಘ್ರ

ನಗರಗಳ ವ್ಯಾಪ್ತಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ
Last Updated 7 ಸೆಪ್ಟೆಂಬರ್ 2022, 12:22 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ನಗರ/ಪಟ್ಟಣ ಕೇಂದ್ರಗಳ ಹಿಂದುಳಿದ ಪದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸಲು ನೂತನವಾಗಿ ಒಂಭತ್ತು 'ನಮ್ಮ‌ ಕ್ಲಿನಿಕ್'ಗಳನ್ನು ತೆರೆಯುವುದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯು ಸಿದ್ಧತೆ ನಡೆಸಿದೆ.

ನಗರ ಪ್ರದೇಶಗಳಲ್ಲಿರುವ ಬಡವರಿಗೂ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಈ ವಿನೂತನ ಯೋಜನೆ ಜಾರಿಗೊಳಿಸುತ್ತಿದೆ. ಸಣ್ಣ ಪ್ರಮಾಣದ ಆರೋಗ್ಯ ಸೇವೆಗಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿರುವ ಬಡವರಿಗೆ ಸರ್ಕಾರದಿಂದ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

’ನಮ್ಮ ಕ್ಲಿನಿಕ್‌‘ನಲ್ಲಿ ಒಬ್ಬರು ಒಬ್ಬರು ವೈದ್ಯ, ಒಬ್ಬರು ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಡಿ ದರ್ಜೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ಅಗತ್ಯ ಔಷಧಿಗಳನ್ನು ಕ್ಲಿನಿಕ್‌ನಿಂದ ಒದಗಿಸಲಾಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾದರಿಯಲ್ಲಿಯೇ ಆರೋಗ್ಯ ಸೇವೆ ನೀಡಲಾಗುತ್ತದೆ. ಆದರೆ, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಸ್ಥಳದಲ್ಲೇ ’ನಮ್ಮ ಕ್ಲಿನಿಕ್‌‘ ಆರಂಭಿಸುತ್ತಿರುವುದು ವಿಶೇಷ.

ಪ್ರತಿ ತಾಲ್ಲೂಕಿಗೂ ನಮ್ಮ ಕ್ಲಿನಿಕ್‌ಗಳನ್ನು ಮಂಜೂರಿ ಮಾಡಿದ್ದು, ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಪೂರ್ವತಯಾರಿ ಆರಂಭಿಸಲಾಗಿದೆ. ಯಾವುದಾದರೂ ಇಲಾಖೆಯ ಸರ್ಕಾರಿ ಕಟ್ಟಡ ಲಭ್ಯವಿದ್ದರೆ ಎರವಲು ಪಡೆದುಕೊಳ್ಳುವುದು ಅಥವಾ ಆರೋಗ್ಯ ಇಲಾಖೆಯ ಕಟ್ಟಡವೇ ಇದ್ದರೆ, ಮಾರ್ಪಾಡು ಮಾಡಿಕೊಂಡು ನಮ್ಮ ಕ್ಲಿನಿಕ್‌ ಸೇವೆ ಪ್ರಾರಂಭಿಸುವುದಕ್ಕೆ ಸರ್ಕಾರವು ಮಾರ್ಗಸೂಚಿಗಳನ್ನು ನೀಡಿದೆ. ಇದಲ್ಲದೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ರಾಯಚೂರು ಜಿಲ್ಲೆಗೆ ಒಟ್ಟು ₹88.57 ಲಕ್ಷ ಅನುದಾನ ಒದಗಿಸಲಾಗಿದೆ.

ರಾಯಚೂರು, ಲಿಂಗಸುಗೂರು, ಮಸ್ಕಿ, ಸಿರವಾರ, ದೇವದುರ್ಗ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ನಮ್ಮ ಕ್ಲಿನಿಕ್‌ ಸ್ಥಾಪನೆಯಾದರೆ, ಸಿಂಧನೂರು ಮತ್ತು ಮಾನ್ವಿ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಎರಡು ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ.

ನೂತನ ಕ್ಲಿನಿಕ್‌ಗಳಿಗೆ ಅಗತ್ಯ ವೈದ್ಯರು, ಸ್ಟಾಫ್‌ ನರ್ಸ್‌ ಹಾಗೂ ಇತರೆ ಸಿಬ್ಬಂದಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈಚೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT