ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿದಾದ ರಾಜಕಾಲುವೆಯಿಂದ ಸಂಕಷ್ಟ, ಅತಿಕ್ರಮಣಕಾರರ ದಾಖಲೆ ಕೇಳುವರಿಲ್ಲ!

Last Updated 22 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದ ಹಲವು ಕಡೆಗಳಲ್ಲಿ ರಾಜಕಾಲುವೆ ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಮತ್ತು ಮನೆಗಳಿಗೆ ಹೆಚ್ಚುವರಿ ಅವರಣ ಗೋಡೆಗಳನ್ನು ನಿರ್ಮಿಸಿಕೊಳ್ಳಲು ನಗರಸಭೆಯಿಂದ ಅನುಮತಿ ಪಡೆದಿಲ್ಲ. ಆದರೆ, ಅತಿಕ್ರಮಣವಾಗಿದೆ ಎಂದು ದೂರು ಸಲ್ಲಿಸಿದವರು ನೂರಾರು ದಾಖಲೆಗಳನ್ನು ಕೊಡಬೇಕಾಗಿದೆ!

ಅತಿಕ್ರಮಣ ಕಟ್ಟಡಗಳ ಬಗ್ಗೆ ದೂರು ಸಲ್ಲಿಸಿರುವ ವಿವಿಧ ಸಮಾಜಪರ ಸಂಘಟನೆಗಳ ಪದಾಧಿಕಾರಿಗಳು ಹೀಗೆ ಆರೋಪಿಸುವುದು ಸಾಮಾನ್ಯವಾಗಿದೆ. ಒಂದು ಕಡೆ ವಿಸ್ತಾರವಾಗಿ ಹರಿಯುವ ರಾಜಕಾಲುವೆ ಇದ್ದಕ್ಕಿದ್ದಂತೆ ಕಿರಿದಾಗಿರುವುದು ಮೇಲ್ನೊಟದಲ್ಲೇ ಗೊತ್ತಾಗುತ್ತದೆ. ಇದನ್ನು ಅತಿಕ್ರಮಣ ಎಂದು ಪರಿಗಣಿಸದಿದ್ದರೂ, ಕನಿಷ್ಠಪಕ್ಷ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುವುದಿಲ್ಲ. ಅತಿಕ್ರಮಣ ಹೇಗಾಗಿದೆ ಎಂದು ಸಾಬೀತುಪಡಿಸಿ ಎಂದು ನಗರಸಭೆ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ದೂರುದಾರರಿಗೆ ಸವಾಲು ಹಾಕುತ್ತಾರೆ.

ಮಾವಿನಕೆರೆಯಿಂದ ಬಸವೇಶ್ವರ ವೃತ್ತ, ಬೇರೂನ್‌ಕಿಲ್ಲಾವರೆಗಿನ ಕೋಟೆ ಕಂದಕಕ್ಕೆ ಪ್ರಭಾವಿಗಳು ಪ್ರತಿದಿನವೂ ಕಟ್ಟಡಗಳ ಅವಶೇಷ ತುಂಬಿಸುತ್ತಿದ್ದಾರೆ. ಅದನ್ನು ಸಂರಕ್ಷಣೆ ಮಾಡುವುದು ಯಾರ ಹೊಣೆ ಎಂಬುದು ಕಂದಾಯ ಇಲಾಖೆ, ನಗರಸಭೆ ಹಾಗೂ ಪುರಾತತ್ವ ಇಲಾಖೆಗಳ ಮಧ್ಯೆ ಇಂದಿಗೂ ಗೊಂದಲವಿದೆ. ಕಂದಕದ ಪಕ್ಕದಲ್ಲಿ ಅಥವಾ ಕಂದಕದೊಳಗೆ ಕಟ್ಟಡ ನಿರ್ಮಿಸಿಕೊಳ್ಳಲು ಪುರಾತತ್ವ ಇಲಾಖೆ ಪರವಾನಿಗೆ ನೀಡುವುದಿಲ್ಲ. ಆದರೆ, ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ನಗರದ ಕೊಳಚೆ ಹಾಗೂ ಮಳೆನೀರು ಹರಿದು ಹೋಗಲು ನಿರ್ಮಿಸಿರುವ ರಾಜಕಾಲುವೆ ಕೂಡಾ ಒತ್ತುವರಿ ಆಗುತ್ತಿದೆ. ಇದರ ನಿರ್ಮಾಣ ಮತ್ತು ನಿರ್ವಹಣೆ ನಗರಸಭೆಗೆ ಸೇರಿದೆ.

ಎಂ.ವೀರಣ್ಣ ವೃತ್ತದ ಬಳಿ, ಬೂಬ್‌ ಭವನ ಹಿಂಭಾಗ, ಅಶೋಕ ಡಿಪೋ ಹತ್ತಿರ.. ಅನೇಕ ಕಡೆಗಳಲ್ಲಿ ರಾಜಕಾಲುವೆ ಕಿಷ್ಕಿಂಧೆಯಾಗಿ ಹರಿಯತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ರಾಜಕಾಲುವೆಯಲ್ಲಿ ಹರಿದುಹೋಗಬೇಕಾದ ನೀರೆಲ್ಲವೂ ರಸ್ತೆಯ ಮೇಲೆ ಹರಿಯುತ್ತದೆ. ಆವಾಗಲೂ ಸಹ ತೇಪೆ ಹಾಕುವ ಕೆಲಸ ನಡೆಯುತ್ತದೆ ವಿನಾ, ಅತಿಕ್ರಮಣ ತೆರವಿಗೆ ಅಧಿಕಾರಿಗಳು ಮುಂದಾಗುವುದಿಲ್ಲ. ಅತಿಕ್ರಮಣಗಳ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ, ದೂರು ಬಂದಿಲ್ಲ ಎಂದು ಮೌನ ವಹಿಸುತ್ತಾರೆ ಎನ್ನುವ ಆರೋಪ ಜನರದ್ದು.

‘ಅಧಿಕಾರಿಗಳು ಯಾರ ಪರವಾಗಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಅತಿಕ್ರಮಣವನ್ನು ಸಾಬೀತುಪಡಿಸುವುದಕ್ಕಾಗಿ ಕಟ್ಟಡ ನಿರ್ಮಿಸಿಕೊಳ್ಳುವವರನ್ನು ಮತ್ತು ಅಧಿಕಾರಿಗಳನ್ನು ಇಬ್ಬರನ್ನು ದೂರುದಾರರು ಎದುರು ಹಾಕಿಕೊಳ್ಳಬೇಕು. ಇದಕ್ಕಾಗಿ ಸ್ವಂತ ಹಣ ಖರ್ಚು ಮಾಡಿಕೊಳ್ಳಬೇಕು. ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಕಠಿಣ ಕ್ರಮ ಜರುಗಿಸುವ ದಕ್ಷ ಅಧಿಕಾರಿಗಳು ರಾಯಚೂರಿಗೆ ಬರುತ್ತಿಲ್ಲ’ ಎನ್ನುತ್ತಾರೆ ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಜೇಶಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT