ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರಿ, ಜನಪ್ರತಿನಿಧಿಗಳಿಗೆ ಬದ್ಧತೆಯೇ ಇಲ್ಲ’

ಮಕ್ಕಳ ರಕ್ಷಣಾ ವ್ಯವಸ್ಥೆ ಬಲಪಡಿಸುವ ಮಾಹಿತಿ ಮತ್ತು ಕ್ರಿಯಾಯೋಜನೆಯ ಕಾರ್ಯಾಗಾರ
Last Updated 6 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ರಾಯಚೂರು: ಮಕ್ಕಳ ಹಕ್ಕುಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿದ್ದು, ಮಕ್ಕಳಿಗೆ ಹಕ್ಕುಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಬದ್ಧತೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ರಕ್ಷಣಾ ವ್ಯವಸ್ಥೆ ಬಲಪಡಿಸುವ ಕುರಿತು ಗುರುವಾರ ಆಯೋಜಿಸಿದ್ದ ಮಾಹಿತಿ ಮತ್ತು ಕ್ರಿಯಾಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿನ ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳು ಲಭಿಸಬೇಕು. ಆದರೆ, ಅಂಗನವಾಡಿಯಿಂದ ಹಿಡಿದು ಶಾಲಾ ಹಂತದವರೆಗೂ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಸರಿಯಾದ ಕೊಠಡಿ, ಶೌಚಾಲಯ, ವಿಷಯವಾರು ಶಿಕ್ಷಕರ ಕೊರತೆಯೂ ಮಕ್ಕಳು ಹಕ್ಕುಗಳಿಂತ ವಂಚಿತರಾಗುವಂತೆ ಮಾಡಿದೆ ಎಂದರು.

ಸಮಾಜದಲ್ಲಿ ಭಿಕ್ಷಾಟನೆ, ಬಾಲ ಕಾರ್ಮಿಕತೆ ಹಾಗೂ ಬಾಲ್ಯ ವಿವಾಹಗಳು ಇನ್ನೂ ಜೀವಂತವಿವೆ. ಆಡಳಿತ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಿಂಗಸುಗೂರಿನ ತಾಲ್ಲೂಕಿನ ಪ್ರಕರಣವನ್ನು ಉಲ್ಲೇಖಿಸಿ ಅಂಗನವಾಡಿಯ ಸೂಪರ್‌ವೈಸರ್ ಜಿಲ್ಲಾಡಳಿತಕ್ಕೆ ಸವಾಲು ಮಾಡುತ್ತಾರೆ ಎಂದರೆ ಎಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಗೆಟ್ಟಿರಬಹುದು ಎಂದು ತಿಳಿಸಿದರು.

ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಬಹಳಷ್ಟು ಸಮಸ್ಯೆಗಳಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಮಕ್ಕಳ ಸಮಸ್ಯೆಗಳ ಬಗ್ಗೆ ಪರಿಹಾರಗಳು ದೊರಕಿಸಬೇಕು. ಮಕ್ಕಳ ಸಹಾಯವಾಣಿ, ಕಾನೂನು ಬದ್ಧ ಸಂಸ್ಥೆಗಳು ಹಾಗೂ ಸಂಘಸಂಸ್ಥೆಗಳು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿವೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಒಂದನೇ ಹೆಚ್ಚುವರಿ ನ್ಯಾಯಾಧೀಶ ಎಂ.ಮಹಾದೇವಯ್ಯ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ದದರ್ಶಿ ಮಹ್ಮದ್ ಯೂಸೂಫ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳಾ ಹೆಗಡೆ ಮಾತನಾಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ, ಕೊಪ್ಪಳ ಯೂನಿಸೆಫ್‌ ಮಕ್ಕಳ ಸಂರಕ್ಷಣಾ ಯೋಜನೆ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT