ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಲ್ಲ, ಕಿವಿಯಿಲ್ಲ, ಚರ್ಮ ದಪ್ಪಗಾಗಿದೆ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

Last Updated 30 ಸೆಪ್ಟೆಂಬರ್ 2019, 15:36 IST
ಅಕ್ಷರ ಗಾತ್ರ

ರಾಯಚೂರು: ‘ಪ್ರವಾಹ ಬಂದು 50 ದಿನಗಳಾದರೂ ಮನೆ ಬಿದ್ದವರಿಗೆ ಬಿಜೆಪಿ ಸರ್ಕಾರ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ. ಪರಿಹಾರ ಕೋರಲು ರಾಜ್ಯ ಸರ್ಕಾರಕ್ಕೆ ಧೈರ್ಯ ಇಲ್ಲದಿದ್ದರೆ, ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಎಂದು ಒತ್ತಾಯಿಸಲಾಗಿದೆ. ಆದರೆ, ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ, ಬಾಯಿಲ್ಲ, ಚರ್ಮ ದಪ್ಪಗಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಜಿಲ್ಲೆಯಲ್ಲಿ ನೆರೆಪೀಡಿತ ಗ್ರಾಮಗಳ ಭೇಟಿಗೆ ತೆರಳುವ ಪೂರ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 2.5 ಲಕ್ಷ ಮನೆಗಳು ಬಿದ್ದಿವೆ. ಒಂದು ಕುಟುಂಬದಲ್ಲಿ ಕನಿಷ್ಠ ಮೂರು ಜನರು ವಾಸಿಸುತ್ತಿದ್ದು, ಒಟ್ಟು 7.5 ಲಕ್ಷ ಜನರು ಬೀದಿಯಲ್ಲಿ ಬದುಕು ಕಳೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಕ್ಕೆ ಭೇಟಿ ನೀಡಿ ವಾಪಸ್‌ ಹೋಗಿದ್ದಾರೆ. ಇದುವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ’ ಎಂದರು.

‘ರಾಜ್ಯದಲ್ಲಿ ₹36 ಸಾವಿರ ಕೋಟಿ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಸರ್ಕಾರ ಕೋರಿದೆ. ಆದರೆ, ಇದಕ್ಕೆ ಸ್ಪಂದನೆ ಕೊಡುತ್ತಿಲ್ಲ. ಯಡಿಯೂರಪ್ಪ ಅಶಕ್ತ ಮುಖ್ಯಮಂತ್ರಿಯಾಗಿದ್ದಾರೆ. ಸೆಪ್ಟೆಂಬರ್‌ 7 ರಂದು ಬೆಂಗಳೂರಿಗೆ ಬಂದಿದ್ದ ಪ್ರಧಾನಮಂತ್ರಿಗೆ ಕಾಂಗ್ರೆಸ್‌ನಿಂದ ಪತ್ರವೊಂದನ್ನು ಕಳುಹಿಸಿ, ಸಮಯಾವಕಾಶ ಕೋರಲಾಗಿತ್ತು. ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸುವ ಉದ್ದೇಶಕ್ಕಾಗಿ ಸಮಯ ಕೇಳಿದರೂ ಅವಕಾಶ ನೀಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಪ್ರವಾಹ ನಿಭಾಯಿಸಲು ವಿಫಲವಾಗಿವೆ’ ಎಂದು ಹರಿಹಾಯ್ದರು.

ಚುನಾವಣಾ ಆಯೋಗದ ದುರ್ಬಳಕೆ:‘ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲ ಸಲ, ಇಷ್ಟೊಂದು ಪೂರ್ವದಲ್ಲಿ ಚುನಾವಣೆ ದಿನ ನಿಗದಿಗೊಳಿಸಿ ಚುನಾವಣೆ ಆಯೋಗವು ದಿನಾಂಕ ಘೋಷಿಸಿದೆ. ಸರ್ಕಾರದಿಂದ ಅನರ್ಹ ಶಾಸಕರಿಗೆ ಅನುಕೂಲ ಮಾಡಿಕೊಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ’ ಎಂದರು.

‘ರಾಜ್ಯದಲ್ಲಿ 105 ಶಾಸಕರ ಬೆಂಬಲ ಪಡೆದು ಬಿಜೆಪಿ ಆಡಳಿತ ನಡೆಸುತ್ತಿದೆ. 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೆ, ಅದರಲ್ಲಿ ಎಲ್ಲ ಸ್ಥಾನಗಳಲ್ಲೂ ಕಾಂಗ್ರೆಸ್‌ ಜಯಭೇರಿ ಸಾಧಿಸಲಿದೆ. ಉಪಚುನಾವಣೆಯಲ್ಲಿ ಆಡಳಿತ ಪಕ್ಷಗಳು ಗೆಲ್ಲುವುದಿಲ್ಲ ಎಂಬುದು ಹಿಂದೆ ಸಾಕಷ್ಟು ಉದಾಹರಣೆಗಳಿವೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಜನರು ಮತ ಚಲಾಯಿಸಲಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜ, ಬಸವರಾಜ ಪಾಟೀಲ ಇಟಗಿ, ಶಾಸಕ ಬಸನಗೌಡ ದದ್ದಲ, ಮುಖಂಡರಾದ ವಿರೂಪಾಕ್ಷಪ್ಪ, ಬಿ.ವಿ. ನಾಯಕ, ಹಂಪನಗೌಡ ಬಾದರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT