ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜಕ್ಕಿಂತ ಮಿಗಿಲಾದ ಧ್ವಜವಿಲ್ಲ: ವಿದ್ಯಾಸಾಗರ್ ಚಿನಮಗೇರಿ

Last Updated 5 ಆಗಸ್ಟ್ 2022, 14:15 IST
ಅಕ್ಷರ ಗಾತ್ರ

ರಾಯಚೂರು: ರಾಷ್ಟ್ರಧ್ವಜಕ್ಕಿಂತಲೂ ಮಿಗಿಲಾದ ಸ್ಥಾನ ನಮ್ಮ ದೇಶದಲ್ಲಿ ಬೇರೆ ಯಾವ ಧ್ವಜಗಳಿಗೂ ಇಲ್ಲ. ತ್ರಿವರ್ಣ ಧ್ವಜವು ಭಾರತದ ಏಕತೆ, ಸಮಗ್ರತೆ ಮತ್ತು ಭಾತೃತ್ವ ಭಾವನೆಗಳ ಸಮ್ಮಿಳಿತವಾಗಿದೆ ಎಂದು ಭಾರತ ಸೇವಾದಳ ವಿಭಾಗೀಯ ಸಂಘಟಕ ವಿದ್ಯಾಸಾಗರ್ ಚಿನಮಗೇರಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸ್ವತಂತ್ರೋತ್ಸವದ ಅಮೃತ ಮಹೋತ್ಸವದ ಅಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತ್ರಿವರ್ಣ ಧ್ವಜವು ಭಾರತೀಯರೆಲ್ಲರ ಆತ್ಮ ಗೌರವದ ಸಂಕೇತವಾಗಿದೆ. ಬಾವುಟದಲ್ಲಿನ ಕೇಸರಿ, ಬಿಳಿ, ಹಸಿರು ಬಣ್ಣಗಳು ಮತ್ತು ಮಧ್ಯದಲ್ಲಿನ ಅಶೋಕ ಚಕ್ರವು ಭಾರತೀಯರ ಉದಾತ್ತ ಗುಣಗಳು ಮತ್ತು ಆದರ್ಶಗಳನ್ನು ಪ್ರತಿಬಿಂಬಿಸುತ್ತವೆ. ಕೇಸರಿ ವರ್ಣವು ತ್ಯಾಗ ಮತ್ತು ಬಲಿದಾನಗಳನ್ನು, ಬಿಳಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯನ್ನು, ಹಸಿರು ವರ್ಣವು ಸಮೃದ್ಧತೆಯನ್ನು ಪ್ರತಿನಿಧಿಸಿದರೆ ಮಧ್ಯದಲ್ಲಿನ ಅಶೋಕ ಚಕ್ರವು ಭಾರತದ ಕ್ರಿಯಾಶೀಲತೆಯನ್ನು ಮತ್ತು ನಿರಂತರ ಪ್ರಗತಿಯನ್ನು ಸಂಕೇತಿಸುತ್ತದೆ ಎಂದು ಮನವರಿಕೆ ಮಾಡಿದರು.

ರಾಷ್ಟ್ರದ ಸಮಗ್ರತೆ ಮತ್ತು ಭಾವೈಕ್ಯತೆಯನ್ನು ಗಟ್ಟಿಗೊಳಿಸಲು, ಭಾರತೀಯರ ದೇಶ ಪ್ರೇಮವನ್ನು ಬಲಪಡಿಸಲು, ಭಾರತೀಯರೆಲ್ಲರೂ ಒಂದು ಎಂಬ ಭಾವವನ್ನು ಪ್ರೇರೇಪಿಸಲು ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನ ಯಶಸ್ವಿಯಾಗಿ ಆಯೋಜನೆಗೊಳ್ಳುವಲ್ಲಿ ವಿದ್ಯಾರ್ಥಿಯರ ಪಾತ್ರ ಅದರಲ್ಲೂ ಎನ್ ಎಸ್ ಎಸ್ ನ ಸ್ವಯಂ ಸೇವಕಿಯರ ಪಾತ್ರವು ಪ್ರಮುಖವಾಗಿದೆ ಎಂದರು.

ಮನೆ ಮನೆಗಳಿಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ಸೂಕ್ತ ವಿವರಣೆಗಳನ್ನು ಮತ್ತು ಧ್ವಜ ಸಂಹಿತೆಯ ಮಾಹಿತಿಗಳನ್ನು ಜನರಿಗೆ ತಲುಪಿಸುವ ಮೂಲಕ ಅಭಿಯಾನವು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ತ್ರಿವರ್ಣ ಧ್ವಜದ ವಿನ್ಯಾಸದಲ್ಲಿ ಮಹಾತ್ಮ ಗಾಂಧೀಜಿ, ಮೇಡಂ ಕಾಮಾ ಹಾಗೂ ಪಿಂಗಾಲಿ ವೆಂಕಯ್ಯ ಅವರ ಕೊಡುಗೆಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನಕುಮಾರ್ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಕುರಿತು ಜನರಿಗೆ ಸೂಕ್ತ ಜಾಗೃತಿಯನ್ನು ಮೂಡಿಸಿ ಅಭಿಯಾನವು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಜೀವನದಲ್ಲಿ ಆದ್ಯತೆಯ ಸ್ಥಾನವನ್ನು ನಮಗೆ ಅಸ್ತಿತ್ವವನ್ನು ನೀಡಿರುವ ದೇಶಕ್ಕೆ ಕೊಡಬೇಕು ಮತ್ತು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಸ್ವಯಂಸೇವಕಿಯರಿಗೆ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ್, ರಾಷ್ಟ್ರಧ್ವಜದ ಮಹತ್ವ ಮನವರಿಕೆ ಮಾಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸುಗುಣಾ ಬಸವರಾಜ್, ಪ್ರೊ. ಉಮಾದೇವಿ, ಪ್ರೊ. ಶರಣಗೌಡ, ಪ್ರೊ. ರಂಗನಾಥ ಬಿಲ್ಲರ್, ಡಾ. ಮಲ್ಲಯ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT