ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಬಂಧಿತ ಪ್ರದೇಶ’ದಲ್ಲಿ ನಿಲ್ಲದ ಸಂಚಾರ

ದೊಡ್ಡ ಕೆರೆ ರಕ್ಷಣೆ ಮಾಡದಿದ್ದರೆ ಹೋರಾಟ; ಎಚ್ಚರಿಕೆ
Last Updated 6 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಕುಷ್ಟಗಿ ರಸ್ತೆಯ ಭಗೀರಥ ಉದ್ಯಾನದಲ್ಲಿರುವ ದೊಡ್ಡ ಕೆರೆಯ ಮೇಲೆ ‘ಸಾರ್ವಜನಿಕರು ಸಂಚಾರ ಮಾಡಬಾರದು ಎನ್ನುವ ಕಾರಣಕ್ಕೆ ಅಲ್ಲಿ ಎರಡು ಕಡೆ ‘ನಿರ್ಬಂಧಿತ ಪ್ರದೇಶ’ ಎಂದು ನಾಮಫಲಕಗಳನ್ನು ಹಾಕಿದ್ದರೂ ಕೆರೆ ಮೇಲೆ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ.

ಸಿಂಧನೂರು ನಗರ ವ್ಯಾಪ್ತಿಯಲ್ಲಿ ಬರುವ ಒಟ್ಟು 31 ವಾರ್ಡುಗಳಿಗೆ ಈ ಕೆರೆಯಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ಕಾಪಾಡಿಕೊಳ್ಳಬೇಕಾಗಿರುವ ಜವಾಬ್ದಾರಿ ನಗರಸಭೆಯದ್ದಾಗಿದೆ. ಆದರೆ ಇವರ ನಿಷ್ಕಾಳಜಿ ಮತ್ತು ಅಸಡ್ಡೆತನದಿಂದ ಕೆರೆಯ ಏರಿ ಯಾವ ಸಮಯದಲ್ಲಿ ಕುಸಿದು ಬೀಳುತ್ತದೆಯೋ ಎಂಬ ಭೀತಿ ಎದುರಾಗಿದೆ.

ನಗರದ ಜನತೆಗೆ ಕುಡಿಯಲು ನೀರು ಸರಬರಾಜು ಮಾಡುವ ದೊಡ್ಡ ಕೆರೆಯ ಒಡ್ಡುಗಳು ಈಗಾಗಲೇ ಬಿರುಕು ಬಿಟ್ಟಿವೆ. ಮುಖ್ಯವಾಗಿ ತಾಲ್ಲೂಕು ಕ್ರೀಡಾಂಗಣದ ಪಕ್ಕದ ಒಡ್ಡು ಬಿರುಕು ಬಿಟ್ಟು ಒಳಭಾಗದಲ್ಲಿ ಪಿಂಚಿಂಗ್ ಮಾಡಲಾಗಿದ್ದ ಕಲ್ಲುಗಳು ಜರಿದು ಬಿದ್ದಿವೆ. ಆರಂಭದಲ್ಲಿ ನಗರಸಭೆ ಅಧಿಕಾರಿಗಳು ದುರಸ್ತಿ ಕಾರ್ಯ ಪೂರ್ಣಗೊಳಿಸಿ ಕೆರೆ ನೀರು ತುಂಬಿಸುವುದಾಗಿ ಹೇಳುತ್ತಿದ್ದರು. ಆದರೆ, ಕುಸಿದ ಕೆರೆಯನ್ನು ದುರಸ್ತಿಗೊಳಿಸದೆ ಇರುವ ಸ್ಥಿತಿಯಲ್ಲಿಯೇ ನೀರು ತುಂಬಿಸಿ ಕೈತೊಳೆದುಕೊಂಡರು. ಅಂದಿನಿಂದ ಇಂದಿನವರೆಗೂ ನಗರಸಭೆ ಪೌರಾಯುಕ್ತರಾಗಲಿ, ಅಧಿಕಾರಿಗಳಾಗಲಿ ಇತ್ತ ಕಣ್ಣೆತ್ತಿ ನೋಡದಿರುವುದು ಇವರ ನಿರ್ಲಕ್ಷ ಧೋರಣೆಗೆ ಸಾಕ್ಷಿಯಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.

ಕೆರೆಯ ಒಡ್ಡು ಕುಸಿದ ನಂತರ ಕೆರೆ ಮುಂಭಾಗ ಮತ್ತು ಒಳಭಾಗದಲ್ಲಿ ಮೆಟ್ಟಿಲುಗಳ ಬಳಿ ಕೆರೆಯ ಮೇಲೆ ‘ನಿರ್ಬಂಧಿತ ಪ್ರದೇಶ’ ಎಂದು ನಗರಸಭೆ ಕಾರ್ಯಾಲಯದಿಂದ ನಾಮಫಲಕಗಳನ್ನು ಅಳವಡಿಸಲಾಗಿದೆ. ಆದರೆ ಈ ನಾಮಫಲಕ ಹೆಸರಿಗೆ ಮಾತ್ರ ಇದ್ದಂತಿವೆ. ಕೆರೆಯ ಕಾವಲಿಗಾಗಿ ಸಿಬ್ಬಂದಿಯನ್ನು ನೇಮಿಸಿಲ್ಲ.

ನಿತ್ಯ ಜನರ ಸಂಚಾರ ಹೆಚ್ಚಾಗುತ್ತಿರುವುದರಿಂದ ಕೆರೆಯ ಏರಿ ಸಂಪೂರ್ಣವಾಗಿ ಬೀಳುವ ಸಾಧ್ಯತೆ ಇದೆ. ಕೂಡಲೇ ನಗರಸಭೆ ಅಧಿಕಾರಿಗಳು ಕೆರೆಯ ಏರಿಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆರ್‌ವೈಎಫ್ ರಾಜ್ಯ ಘಟಕದ ಸಂಚಾಲಕ ನಾಗರಾಜ ಪೂಜಾರ್ ಹಾಗೂ ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ.

‘ಹಣದ ಕೊರತೆಯಿಂದ ಕೆರೆಯ ಒಡ್ಡು ದುರಸ್ತಿ ಕಾರ್ಯ ವಿಳಂಬವಾಗಿದೆ. ಈಗ ಕ್ರಿಯಾ ಯೋಜನೆ ತಯಾರಿಸಿ ₹ 51 ಲಕ್ಷ ಹಣ ಮೀಸಲಿರಿಸಿ ಟೆಂಡರ್ ನೀಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದುನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT