ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟವಾಗದೇ ಉಳಿದಿರುವ ಈರುಳ್ಳಿ! ರೈತರು ಕಂಗಾಲು

ಈರುಳ್ಳಿ ಬೇರೆ ಕಡೆಗೆ ಮಾರಾಟ ಮಾಡುವಂತೆ ಎಪಿಎಂಸಿಯಿಂದ ಸೂಚನೆ
Last Updated 11 ಫೆಬ್ರುವರಿ 2023, 14:36 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಈರುಳ್ಳಿ ಮಾರಾಟ-ಖರೀದಿ ಪ್ರಕ್ರಿಯೆ ಚುರುಕಾಗಿ ನಡೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದರ ಕುಸಿತದಿಂದ ನಷ್ಟಕ್ಕೀಡಾಗಿದ್ದ ರೈತರು ಇದೀಗ ಕಣ್ಣೀರು ಹಾಕುತ್ತಿದ್ದಾರೆ. ಎಪಿಎಂಸಿ ಪ್ರಾಂಗಣದಲ್ಲಿ ರಾಶಿಹಾಕಿದ್ದ ಈರುಳ್ಳಿ ಖರೀದಿಗೆ ವ್ಯಾಪಾರಿಗಳು ಎರಡು ದಿನಗಳಾದರೂ ಬಂದಿರಲಿಲ್ಲ. ಇದರಿಂದ ಅಸಹಾಯಕರಾದ ರೈತರು ರಾಯಚೂರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ಫೆಬ್ರುವರಿ 9 ರಂದು ನಡೆಯಿತು. ಇದೀಗ ಎಪಿಎಂಸಿ ಪ್ರಾಂಗಣಕ್ಕೆ ಈರುಳ್ಳಿ ತೆಗೆದುಕೊಂಡು ಬರದಂತೆ ರೈತರಿಗೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ.

‘ಈರುಳ್ಳಿ ಖರೀದಿದಾರರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ, ಸ್ಪರ್ಧಾತ್ಮಕ ಬೆಲೆ ಸಿಗುವುದು ಕಷ್ಟವಾಗಿರುತ್ತದೆ. ಪ್ರತಿದಿನ ವ್ಯಾಪಾರ ವಹಿವಾಟು ಸರಾಗವಾಗಿ ನಡೆಯುತ್ತಿಲ್ಲ. ಮಾರಾಟಕ್ಕೆ ತರುವ ಉತ್ಪನ್ನ ವ್ಯಾಪಾರವಾಗದೇ ಉಳಿಯುತ್ತಿದೆ. ಎಲ್ಲಾ ರೈತ ಬಾಂಧವರು ಬೇರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿಕೊಳ್ಳಬೇಕು’ ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.

ಈರುಳ್ಳಿ ಬೆಳೆದಿರುವ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು ತಾಲ್ಲೂಕುಗಳು, ಯಾದಗಿರಿ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಗಡಿಭಾಗದ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ ಬೆಳೆಯುವುದಕ್ಕೆ ಮಾಡಿರುವ ಖರ್ಚಾದರೂ ಮರಳುತ್ತದೆ ಎನ್ನುವ ನಿರೀಕ್ಷೆ ರೈತರಲ್ಲಿತ್ತು. ಮಾರುಕಟ್ಟೆಯಲ್ಲಿ ಖರೀದಿದಾರರೇ ಇಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

‘ಈರುಳ್ಳಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಕ್ವಿಂಟಲ್‌ಗೆ ₹1,100 ಕಡಿಮೆ ದರ ಇದ್ದರೂ 40 ಕ್ವಿಂಟಲ್‌ ಮಾರಾಟ ಮಾಡಿದ್ದೇನೆ. ಇನ್ನೂ 50 ಕ್ವಿಂಟಲ್‌ ಈರುಳ್ಳಿ ಮಾರಾಟವಾಗದೆ ಉಳಿದಿದೆ. ರಾಯಚೂರು ಎಪಿಎಂಸಿಯಲ್ಲಿ ಈಗ ಮಾರಾಟವಾಗುತ್ತಿಲ್ಲ. ಹೈದರಾಬಾದ್‌ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಮಾರಾಟವಾಗುತ್ತದೆ ಎನ್ನುವ ಭರವಸೆ ಇಲ್ಲ. ವಾಹನದ ಖರ್ಚು ಕೊಡುವುದು ಕಷ್ಟವಾಗುತ್ತದೆ. ಈರುಳ್ಳಿ ಬೆಳೆಯುವುದಕ್ಕೆ ಮಾಡಿದ ಸಾಲ ಹೇಗೆ ತೀರಿಸಬೇಕು ಎನ್ನುವ ಚಿಂತೆಯಲ್ಲಿದ್ದೇನೆ’ ಎಂದು ಪಲಕಂದೊಡ್ಡಿ ರೈತ ಆಂಜನೇಯ ಸಂಕಷ್ಟ ತೋಡಿಕೊಂಡರು.

ರಾಯಚೂರು ಜಿಲ್ಲೆಯ ತರಕಾರಿ ವ್ಯಾಪಾರಿಗಳು ಮಹಾರಾಷ್ಟ್ರದಿಂದ ಈರುಳ್ಳಿ ತರಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಈರುಳ್ಳಿ ಬೇಗನೆ ಹಾಳಾಗುವುದಿಲ್ಲ, ಜನರು ಅದನ್ನೇ ಕೇಳುತ್ತಾರೆ ಎನ್ನುವುದು ವ್ಯಾಪಾರಿಗಳ ಸಮರ್ಥನೆ. ಚಿಲ್ಲರೆ ವಹಿವಾಟಿನಲ್ಲಿ ಪ್ರತಿ ಕೆಜಿ ಈರುಳ್ಳಿ ದರ ₹25 ರಷ್ಟಿದೆ. ಸ್ಥಳೀಯ ಈರುಳ್ಳಿ ಪ್ರತಿ ಕೆಜಿಗೆ ₹20 ದರವಿದೆ.

‘ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹಾಕಿದ್ದರಿಂದ ಮಹಾರಾಷ್ಟ್ರದ ಈರುಳ್ಳಿ ರಾಯಚೂರಿಗೆ ಅತಿಹೆಚ್ಚು ಬರುತ್ತಿದೆ. ಈ ನಿರ್ಬಂಧ ತೆಗೆದುಹಾಕಿದರೆ ರಫ್ತು ಗುಣಮಟ್ಟ ಹೊಂದಿರುವ ಈರುಳ್ಳಿ ಹೊರಹೋಗುತ್ತದೆ. ಸ್ಥಳೀಯ ಈರುಳ್ಳಿ ಸ್ಥಳೀಯವಾಗಿಯೇ ಮಾರಾಟವಾಗುತ್ತದೆ. ಸರ್ಕಾರವು ರೈತರ ಸಂಕಷ್ಟ ತಿಳಿದುಕೊಂಡು ಕೂಡಲೇ ಕ್ರಮ ವಹಿಸಬೇಕು. ಸ್ವಲ್ಪ ತಡಮಾಡಿದರೂ ರೈತರು ಭಾರಿ ನಷ್ಟಕ್ಕೆ ಸಿಲುಕುತ್ತಾರೆ’ ಎಂದು ಈರುಳ್ಳಿ ಬೆಳೆಗಾರ ಲಕ್ಷ್ಮಣಗೌಡ ಕಡಗಂದೊಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT