ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋವೃದ್ಧರ ಸಂಕಷ್ಟಕ್ಕೆ ಸಿಗದ ಸ್ಪಂದನೆ; ಜನವರಿಯಿಂದ ಬಂದಿಲ್ಲ ಮಾಸಾಶನ!

ಅಸ್ಕಿಹಾಳ
Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ

ರಾಯಚೂರು: ನಗರ ವ್ಯಾಪ್ತಿಯ ಅಸ್ಕಿಹಾಳಲ್ಲಿ ಎರಡು ನೂರಕ್ಕೂ ಹೆಚ್ಚು ವಯೋವೃದ್ಧರಿಗೆ ಜನವರಿಯಿಂದ ಸಮರ್ಪಕವಾಗಿ ಮಾಸಾಶನ ಕೈಸೇರಿಲ್ಲ. ಮಕ್ಕಳಿಂದ ಪ್ರತ್ಯೇಕವಾಗಿದ್ದು ಮಾಸಾಶನ ಅವಲಂಬಿಸಿ ಜೀವನ ಸಾಗಿಸುತ್ತಿರುವವರ ಸಂಕಷ್ಟಕ್ಕೆ ಸ್ಪಂದನೆ ಸಿಗುತ್ತಿಲ್ಲ.

ಕೋವಿಡ್‌ನಿಂದ ಲಾಕ್‌ಡೌನ್‌ ಜಾರಿಯಾಗಿದ್ದ ಅವಧಿಯಲ್ಲಿ ಕೆಲವು ವಯೋವೃದ್ಧರು ಭಿಕ್ಷೆ ಬೇಡಿ ಜೀವ ಉಳಿಸಿಕೊಂಡಿದ್ದಾರೆ. ಅಸ್ಕಿಹಾಳದ ತಾಯಮ್ಮ, ಸುಶೀಲಮ್ಮ, ನಿಂಗಪ್ಪ, ಹನುಮಕ್ಕ, ನಾಗಮ್ಮ, ಕರಿಯಪ್ಪ, ವೀರಭದ್ರ.. ಹೀಗೆ ಅನೇಕರು ಮಾಸಾಶನ ಕೈ ಸೇರಿಲ್ಲ ಎಂದು ಗೋಳು ಹೇಳುತ್ತಿದ್ದಾರೆ. ಅಂಚೆಯಣ್ಣನ್ನು ವಿಚಾರಿಸುತ್ತಲೇ ಬಂದಿದ್ದಾರೆ.

ಕೆಲವರಿಗೆ ಜನವರಿಯಿಂದ ಏಪ್ರಿಲ್‌ ವರೆಗಿನ ಮಾಸಾಶನ ಹಿಂಬಾಕಿ ಕೊಟ್ಟಿಲ್ಲ. ಆದರೆ, ಮೇ ಮತ್ತು ಜೂನ್‌ ಎರಡು ತಿಂಗಳುಗಳ ಮಾಸಾಶನವನ್ನು ಈಚೆಗೆ ನೀಡಲಾಗಿದೆ. ಮಕ್ಕಳ ಉದ್ಯೋಗ ಅರಸಿಕೊಂಡು ಮಹಾನಗರಗಳಿಗೆ ಹೋಗಿರುವುದರಿಂದ ಅನೇಕ ವಯೋವೃದ್ಧರು ಏಕಾಂಗಿಯಾಗಿ ಮನೆಗಳಲ್ಲಿದ್ದಾರೆ. ಮಕ್ಕಳಿಗೂ ಉಪಜೀವನ ಸಾಗಿಸುವ ಸವಾಲು. ಹೀಗಾಗಿ ಬಡ ವಯೋವೃದ್ಧರಿಗೆ ಮಾಸಾಶನವೇ ಶ್ರೀರಕ್ಷೆ.

‘ಬ್ಯಾಂಕ್‌ ಖಾತೆ ತೆರೆಯಲಾಗದೆ ಅನೇಕ ವಯೋವೃದ್ಧರು ಹೆಬ್ಬೆರಳು ಸಹಿ ಮಾಡಿ ಮಾಸಾಶನ ಪಡೆಯುತ್ತಿದ್ದಾರೆ. ಈ ಸಹಾಯಕತೆಯನ್ನು ದುರುಪಯೋಗ ಮಾಡಲಾಗುತ್ತಿದೆ. ಅಂಚೆ ಇಲಾಖೆ, ತಹಶೀಲ್ದಾರ್‌ ಕಚೇರಿಗಳಿಗೆ ವಯೋವೃದ್ಧರು ಅಲೆದಾಡಿ ವಾಪಸಾಗುತ್ತಿದ್ದಾರೆ. ಖಜಾನೆ ಇಲಾಖೆಯಲ್ಲಿ ವಿಚಾರಿಸಿದಾಗ, ತಹಶೀಲ್ದಾರ್‌ರಿಂದ ಬಂದಿರುವ ಎಲ್ಲ ಬಿಲ್‌ಗಳನ್ನು ಕೊಡಲಾಗಿದೆ. ಯಾವುದೇ ಬಾಕಿಯಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಗ್ರಾಮಸ್ಥ ಮಹೇಶ ಹೇಳಿದರು.

ಕೋವಿಡ್‌ ಅವಧಿಯಲ್ಲಿ ಊಟವಿಲ್ಲದೆ ಬಳಲುತ್ತಿದ್ದ ವಯೋವೃದ್ಧರಿಗೆ ಸುತ್ತಮುತ್ತಲಿನ ಜನರು ಊಟ ನೀಡಿದ್ದಾರೆ. ಅವರ ಪರವಾಗಿ ಸರ್ಕಾರಿ ಕಚೇರಿಗಳಿಗೆ ಹೋಗಿ ಮಾಸಾಶನ ಏಕೆ ಬರುತ್ತಿಲ್ಲ ಎಂದು ಕೆಲವರು ವಿಚಾರಿಸಿಕೊಂಡು ಬಂದಿದ್ದಾರೆ. ಎಲ್ಲಿಯೂ ಸಮರ್ಪಕವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನುವ ಅಸಹಾಯಕತೆ ಅವರದ್ದು ಕೂಡಾ. ಸರ್ಕಾರದಿಂದ ಹಣ ಬಿಡುಗಡೆಯಾದ ಕೂಡಲೇ ತಲುಪುತ್ತದೆ ಎಂದು ಅಂಚೆ ಇಲಾಖೆಯಲ್ಲಿ ಹೇಳುವ ಮಾತು. ಸರ್ಕಾರವು ವೃದ್ಧರಿಗೆ ಪಿಂಚಣಿಯನ್ನು ಅಧ್ಯತೆಯಿಂದ ಬಿಡುಗಡೆ ಮಾಡುತ್ತಿದೆ. ಮಧ್ಯಂತರದಲ್ಲಿ ಸರಿಯಾದ ಸ್ಪಂದನೆ ಸಿಗದೆ ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT