ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇಲ್ಲ: ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌

Last Updated 3 ಏಪ್ರಿಲ್ 2020, 14:51 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಇದೂವರೆಗೂ 11 ಜನರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಯಾವುದೇ ಪಾಸಿಟಿವ್ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಒಟ್ಟು ಐದು ಹಂತದ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 15 ಫಿವರ್ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಅಲ್ಲಿ ಕೆಮ್ಮು, ನೆಗಡಿ, ಶೀತ, ಜ್ವರ, ಉಸಿರಾಟದ ತೊಂದರೆ ಪರೀಕ್ಷೆಗೆ ಒಳಪಡಿಸಲಾಗುವುದು. ರೋಗ ಲಕ್ಷಣಗಳು ಕಂಡುಬಂದರೆ ಅವರ ರಕ್ತ ಹಾಗೂ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗುವುದು. ರಾಯಚೂರು ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಫಿವರ್ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು ಎಂದರು.

ಎರಡನೇ ಹಂತದಲ್ಲಿ ಫೀವರ್ ಕ್ಲಿನಿಕ್‌ಗಳಲ್ಲಿ ತಪಾಸಣೆ ಆಗುವ ಶಂಕಿತ ರೋಗ ಲಕ್ಷಣಗಳುಳ್ಳವರನ್ನು ಕೊರಂಟೈನ್‌ ಕೇರ್‌ನಲ್ಲಿ ಇರಿಸಲಾಗುವುದು. ಅದಕ್ಕಾಗಿ ಜಿಲ್ಲೆಯಲ್ಲಿ ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು, ವಿವಿಧ ಆಸ್ಪತ್ರೆಗಳಲ್ಲಿ 1,800 ಹಾಸಿಗೆಗಳನ್ನು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲಾ ತಾಲ್ಲೂಕುಗಳ ಕೇಂದ್ರಗಳಲ್ಲಿ ಕೊರಂಟೈನ್‌ ಕೇರ್‌ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಮೂರನೇ ಹಂತದಲ್ಲಿ ಕೊರಂಟೈನ್‌ ಕೇರ್‌ಗಳಲ್ಲಿ ಗುರುತಿಸಲಾದವರನ್ನು ಎಸ್‌ಐಸಿ-ಸೂಪರ್‌ವೈಸರ್ ಐಸೋಲೇಷನ್ ಕೇರ್‌ಗೆ ದಾಖಲಿಸಲಾಗುವುದು. ಅದಕ್ಕಾಗಿ ಸಾವಿರ ಹಾಸಿಗೆಯ ಸಾಮರ್ಥ್ಯದ ಸೂಪರ್ ವೈಸರ್ ಐಸೋಲೇಷನ್ ಕೇರ್‌ಗಳನ್ನಾಗಿ ಸಮುದಾಯ ಭವನಗಳು, ಕೆಲವೊಂದು ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂದರು.

ನಾಲ್ಕನೇ ಹಂತದಲ್ಲಿ ಶಂಕಿತರಿಗೆ ಕೊರೊನಾ ದೃಢಪಟ್ಟಲ್ಲಿ, ಅವರ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗಳನ್ನಾಗಿ ನಗರದಲ್ಲಿರುವ ರಿಮ್ಸ್, ಒಪೆಕ್ ಹಾಗೂ ನವೋದಯಗಳನ್ನು ಪರಿವರ್ತಿಸಲಾಗಿದೆ. ಈ ಮೂರು ಆಸ್ಪತೆಗಳಲ್ಲಿ 500 ಹಾಸಿಗೆಗಳ ಸಾಮರ್ಥ್ಯದ ವಾರ್ಡ್‌ಗಳು ಹಾಗೂ ಐಸೋಲೇಷನ್ ವಾರ್ಡ್‌ಗಳನ್ನು ಸಿದ್ದಪಡಿಸಲಾಗಿದೆ. ಆಮ್ಲಜನಕ ಸೇರಿದಂತೆ ಅಗತ್ಯಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಐದನೇ ಹಂತದಲ್ಲಿ ತೀವ್ರ ಚಿಕಿತ್ಸೆಯ ಐಸಿಯುಗಳು ಸಿದ್ದಗೊಂಡಿವೆ. ರಿಮ್ಸ್, ಒಪೆಕ್ ಹಾಗೂ ನವೋದಯದಲ್ಲಿ ಕೊರೊನಾ ಚಿಕಿತ್ಸೆಗಾಗಿ ತೀವ್ರ ಚಿಕಿತ್ಸಾ ಕೇಂದ್ರಗಳು ಸಿದ್ದಗೊಂಡಿದೆ ಎಂದು ಹೇಳಿದರು.

ಈಗಾಗಲೇ ವಿದೇಶಗಳಿಂದ ಜಿಲ್ಲೆಗೆ 177 ಜನರು ಬಂದಿದ್ದಾರೆ. ಅವರೊಂದಿಗೆ ಸಂಕರ್ಪದಲ್ಲಿದ್ದ 744 ಜನರನ್ನು ಹೋಂ ಕೊರಂಟೈನಲ್ಲಿರಿಸಲಾಗಿದ್ದು, ಅವರಲ್ಲಿ 700 ಜನರು 14 ದಿನಗಳ ಅವಧಿಯನ್ನು ಪೂರೈಸಿದ್ದಾರೆ. 44 ಜನರನ್ನು ಮನೆಯಲ್ಲಿರಿಸಿ ನಿಗಾ ವಹಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಪ್ರತಿ ದಿನ ಅವರ ಆರೋಗ್ಯವನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದರು.

ದೆಹಲಿಯ ನಿಜಾಮುದ್ದಿನ್ ಸಭೆಗೆ ತೆರಳಿದ್ದ ಮಸ್ಕಿ ತಾಲೂಕಿನ ಇಬ್ಬರು ವಾಪಸ್ ಬಂದಿದ್ದಾರೆ. ಅವರು 21 ದಿನಗಳ ಅವಧಿ ಪೂರೈಸಿದ್ದು, ಯಾವುದೇ ರೋಗ ಲಕ್ಷಣವಿಲ್ಲ. ಬೇರೆ ರಾಜ್ಯ ಹೋಗಿ ಬಂದವರು 20 ಜನರಿದ್ದಾರೆ. ಅವರಲ್ಲಿ ಯಾರಿಗೂ ರೋಗದ ಲಕ್ಷಣವಿಲ್ಲ, ಅವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಡಾ.ಕೆ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT