ರಾಯಚೂರಿನಲ್ಲಿ ಬಂದ್‌ಗೆ ಸಿಗದ ಬೆಂಬಲ: ಹೈ.ಕ. ಅಭಿವೃದ್ಧಿಗೆ ಒತ್ತಾಯ

7
ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ರಾಯಚೂರಿನಲ್ಲಿ ಬಂದ್‌ಗೆ ಸಿಗದ ಬೆಂಬಲ: ಹೈ.ಕ. ಅಭಿವೃದ್ಧಿಗೆ ಒತ್ತಾಯ

Published:
Updated:
Deccan Herald

ರಾಯಚೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ರಾಜ್ಯಮಟ್ಟದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ರಾಯಚೂರಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಅಂಗಡಿ, ಮುಗಟ್ಟುಗಳು, ಸಾರಿಗೆ ಹಾಗೂ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ವಿರೋಧಿಸಿ ಹಲವು ಸಂಘಟನೆಗಳ ಮುಖಂಡರು ಪ್ರತ್ಯೇಕವಾಗಿ ಹೋರಾಟ ಮತ್ತು ಧರಣಿ ನಡೆಸುವ ಮೂಲಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು.

ಮುಖಂಡರಿಂದ ಧರಣಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಹೈದರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 371 ಜೆ ಕಾಯ್ದೆ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಯಚೂರು ತಹಸೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರದಿಂದ ಅನ್ಯಾಯವಾಗಿದೆ. ಕೆಲ ಸ್ವಾರ್ಥ ಸಂಘಟನೆಗಳು ಹೈದರಾಬಾದ್ ಕರ್ನಾಟಕ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉತ್ತರ ಕರ್ನಾಟಕ ಬಂದ್‌ ಕರೆ ನೀಡಿರುವುದು ಖಂಡನೀಯ ಎಂದರು.

ಕರ್ನಾಟಕ ಏಕೀಕರಣಕ್ಕಾಗಿ ಹಿರಿಯರು ಹಲವಾರು ವರ್ಷಗಳವರೆಗೆ ಹೋರಾಡಿ ಕಟ್ಟಿರುವ ನಾಡನ್ನು ಬೇರ್ಪಡಿಸಲು ಪ್ರಯತ್ನ ನಡೆಸಿರುವುದು ಅಕ್ಷ್ಯಮ್ಯ ಅಪರಾಧವಾಗಿದೆ. ಡಾ. ಡಿ.ಎಂ.ನಂಜುಂಡಪ್ಪ ವರದಿಯಂತೆ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದು ಸತ್ಯವಾದರೂ, ಹೈದರಾಬಾದ್ ಕರ್ನಾಟಕದಲ್ಲಿ ಅತೀ ಹೆಚ್ಚಿನ ಅಸಮಾನತೆಯಿದೆ. ಉತ್ತರ ಕರ್ನಾಟಕದ ಹೆಸರಿನ ಅನುದಾನ ಹಾಗೂ ಯೋಜನೆಗಳನ್ನು ಮುಂಬೈ ಕರ್ನಾಟಕ ಪಡೆದುಕೊಂಡಿದೆ. ಆದರೂ, ಅಭಿವೃದ್ಧಿ ವಿಷಯದಲ್ಲಿ ಈ ಭಾಗ ಹಿಂದುಳಿದಿರುವುದು ಜಗಜ್ಜಾಹೀರು ಆಗಿದೆ ಎಂದರು.

ಈಚೆಗೆ ಧಾರವಾಡದ ಸಿಎಂಡಿಆರ್ ಸಂಸ್ಥೆ ನಂಜುಂಡಪ್ಪ ವರದಿಯ ನಂತರದ 10 ವರ್ಷಗಳಲ್ಲಾದ ಬದಲಾವಣೆ ಕುರಿತು ಸಮೀಕ್ಷೆ ನಡೆಸಿದ್ದು, ಇದರಲ್ಲಿ ನಂಜುಂಡಪ್ಪ ವರದಿಯಲ್ಲಿ ಈ ಭಾಗದ 21 ತಾಲ್ಲೂಕುಗಳು ಹಿಂದಿಳಿದಿದ್ದರೆ, ಈಗಿನ ಸಮೀಕ್ಷೆಯಲ್ಲಿ 24 ತಾಲ್ಲೂಕುಗಳು ಹಿಂದುಳಿದಿರುವುದು ಆಘಾತಕಾರಿಯಾಗಿದೆ. ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಹೊರಟಿದೆ ಎಂಬುದು ವಿಷಾಯದನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

371 ಜೆ ಕಾಯ್ದೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಅನುಷ್ಠಾನದಲ್ಲಿನ ಗೊಂದಲಗಳಿಂದ ಈ ಭಾಗದ ಜನರಲ್ಲಿ ನಿರಾಸೆ ಮೂಡಿದೆ. ಕಳೆದು ಐದು ವರ್ಷಗಳಿಂದಲೂ ಮೀಸಲಾತಿಯನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ನೂರಕ್ಕೂ ಹೆಚ್ಚಿನ ದೂರುಗಳು ನೀಡಿದರೂ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದ ಈ ಕಾಯ್ದೆ ಈ ಭಾಗದ ಜನರ ಹಕ್ಕೋ ಅಥವಾ ಭಿಕ್ಷೆಯೋ ಎನ್ನುವಂತಾಗಿದೆ ಎಂದು ಆರೋಪಿಸಿದರು.

ಇಂತಹ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಹಾಗೂ ರಾಜಕೀಯ ಬೆಳವಣಿಗೆಗಳು ಆತಂಕ ತಂದಿದ್ದು, ಮುಂಬೈ ಕರ್ನಾಟಕವನ್ನು ಉತ್ತರ ಕರ್ನಾಟಕವೆಂದು ಬಿಂಬಿಸಲು ಪ್ರಯತ್ನ ನಡೆಸಿರುವುದು ಖಂಡನೀಯ. ಧಾರವಾಡ ಹಾಗೂ ಬೆಳಗಾವಿ ಹೋರಾಟಗಾರರೊಂದಿಗೆ ಸಭೆ ನಡೆಸಿ ಈ ಭಾಗಕ್ಕೆ ಅವಮಾನ ಮಾಡಲಾಗಿದ್ದು, ನಂತರ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡಿ, ಹಲವು ಸಚಿವಾಲಯಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಚರ್ಚೆಯಲ್ಲಿ ಈ ಭಾಗಕ್ಕೆ ಅನ್ಯಾಯ ಮಾಡುವ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಣೆ ಮಾಡಬಾರದು. ಒಂದು ವೇಳೆ ಎರಡನೇ ರಾಜಧಾನಿ ಅವಶ್ಯಕವಾದರೆ ಭೌಗೋಳಿಕವಾಗಿ ಉತ್ತರ ಕರ್ನಾಟಕದ ಮಧ್ಯ ಭಾಗದ ಪ್ರದೇಶವನ್ನು ಆಯ್ಕೆ ಮಾಡಬೇಕು. ಕೆಬಿಜೆಎನ್‌ಎಲ್ ಎಂಡಿ ಕಚೇರಿಯನ್ನು ಆಲಮಟ್ಟಿ ಡ್ಯಾಂ ಸಮೀಪಕ್ಕೆ ಸ್ಥಳಾಂತರಿಸಬೇಕು. ರಾಜ್ಯ ಮಟ್ಟದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಬಾರದು. ಒಂದುವೇಳೆ ಸ್ಥಳಾಂತರಿಸುವುದು ಅನಿವಾರ್ಯವಾದರೆ ಬೆಳಗಾವಿಗೆ ಸ್ಥಳಾಂತರಿಸುವಷ್ಟು ಕಚೇರಿಗಳನ್ನು ಹೈದರಾಬಾದ್ ಕರ್ನಾಟಕಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಪ್ರತ್ಯೇಕ ರಾಜ್ಯದ ಕೂಗು ದೊಡ್ಡ ಧ್ವನಿಯಾಗಿ ಹೊರಬರುವುದಕ್ಕಿಂತ ಮುಂಚೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ರಾಜಕೀಯ ಅಧಿಕಾರ ಸಮಾನ ಹಂಚಿಕೆಯಾಗಬೇಕು. ಸಚಿವರ, ನಿಗಮ ಮಂಡಳಿ ಅಧ್ಯಕ್ಷ, ವಿಶ್ವವಿದ್ಯಾಲಯ ಕುಲಪತಿ ನೇಮಕರದಲ್ಲಿ ಸಮಾನತೆ ಹಂಚಿಕೆಯಾಗಬೇಕಿದ್ದು, ರಾಜ್ಯದ ಭವಿಷ್ಯದ ದೃಷ್ಠಿಯಿಂದ ಇದಕ್ಕೆ ಸೂಕ್ತವಾದ ಸೂತ್ರವನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹಾಗೂ ನಗರಸಭೆ ಉಪಾಧ್ಯಕ್ಷ ಜಯಣ್ಣ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಹೋರಾಟಗಾರರಾದ ರಜಾಕ್ ಉಸ್ತಾದ್, ಶಿವಕುಮಾರ ಯಾದವ, ಅಶೋಕಕುಮಾರಜೈನ್, ರಘುವೀರ ನಾಯಕ, ಬಸವರಾಜ ಕಳಸ, ಮುಕ್ತಿಯಾರ್, ಅಂಬಣ್ಣ ಆರೋಇ, ಕೆ.ಇ.ಕುಮಾರ, ರವೀಂದ್ರಪಟ್ಟಿ, ಶಿವಕುಮಾರ ಮ್ಯಾಗಳಮನಿ, ಮಹ್ಮದ್‌ ರಫಿ, ಅಬ್ದುಲ್ ಹೈ ಫೆರೋಜ್, ನರಸಪ್ಪ ದಂಡೋರ ಇದ್ದರು.

ಕರವೇ ಪ್ರತಿಭಟನೆ: ಡಾ. ಡಿ.ಎಂ.ನಂಜುಂಡಪ್ಪ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸಿ ಅಖಂಡ ಕರ್ನಾಟಕವನ್ನು ಉಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್‌ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ ಎಂ., ರಾಜ್ಯ ಸಂಚಾಲಕರು ಬಸವರಾಜ ಪಡುಕೋಟೆ, ಜಿಲಾನಿ ಪಾಷಾ, ಗಂಗಣ್ಣ, ವಿರೂಪಾಕ್ಷಿ, ಜಿಂದಪ್ಪ, ಕೊಂಡಪ್ಪ, ಮಹೇಶ, ಹೊನ್ನಪ್ಪ, ಅಮರಯ್ಯ ಸ್ವಾಮಿ, ಲಕ್ಷ್ಮೀ ಬೋವಿ, ಕೌಲಸಾಬ, ನಂದಪ್ಪ, ವೆಂಕಟೇಶ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !