ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳಲ್ಲಿ ಸಂಚಾರ ಚಿಹ್ನೆಗಳೇ ಮಾಯ!

ಜನರ ಪ್ರಾಣ ಕಸಿಯುತ್ತಿವೆ ಅವೈಜ್ಞಾನಿಕ, ಅಗೋಚರ ರಸ್ತೆ ಉಬ್ಬುಗಳು: ಸುಗಮ ಸಂಚಾರ ವ್ಯವಸ್ಥೆಗಿಲ್ಲ ಯೋಜನೆ
Last Updated 25 ಅಕ್ಟೋಬರ್ 2021, 3:36 IST
ಅಕ್ಷರ ಗಾತ್ರ

ರಾಯಚೂರು: ಸುಗಮವಾಗಿ ಸಂಚರಿಸುವುದಕ್ಕೆ ವಾಹನ ಸವಾರರಿಗೆ ರಸ್ತೆಗಳಲ್ಲಿ ಮಾರ್ಗಸೂಚಿಯಂತೆ ಇರುವ ಚಿಹ್ನೆಗಳು ಜಿಲ್ಲೆಯಾದ್ಯಂತ ಮಾಯವಾಗಿ ವರ್ಷಗಳೇ ಗತಿಸಿವೆ. ಇದರಿಂದ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಕೆಲಸ ಯಾರೂ ಮಾಡುತ್ತಿಲ್ಲ.

ಮಳೆಗಾಲದಲ್ಲಿ ಕಿತ್ತುಹೋಗಿರುವ ರಸ್ತೆಗಳು ಹಾಗೂ ಗುಂಡಿಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡದಿರುವುದು, ಸಂಚಾರಕ್ಕೆ ಸಂಕಷ್ಟ ಆಗಿರುವುದು ಒಂದು ಕಡೆಯಾದರೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ಚಿಹ್ನೆಗಳನ್ನು ಹಾಕದಿರುವುದು ಮತ್ತೊಂದು ರೀತಿಯ ಅಪಾಯವನ್ನು ಸೃಷ್ಟಿಸಿವೆ. ರಸ್ತೆ ಅಪಘಾತಗಳು ಮರುಕಳಿಸುತ್ತಲೇ ಇವೆ.

ವೈಜ್ಞಾನಿಕವಾಗಿ ರಸ್ತೆಗಳನ್ನು ಉಬ್ಬುಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ. ಹೀಗಾಗಿ ಅಪರಿಚಿತರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಉಬ್ಬುಗಳು ಗೋಚರಿಸದೆ ಅಪಘಾತಕ್ಕೀಡಾ ಗುತ್ತಿದ್ದಾರೆ. ವಾಹನಗಳು ಜಖಂ ಆಗುತ್ತಿವೆ. ಬೈಕ್‌ ಹಿಂಬದಿ ಸವಾರರು ನೆಗೆದುಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಪದೇ ಪದೇ ಜರುಗುತ್ತಿವೆ.

ರಾಯಚೂರು ನಗರದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ಮಾಡಲಾಗಿದೆ. ಆದರೆ, ಮಾರ್ಕಿಂಗ್‌ ಮಾಡಿಲ್ಲ. ಮಂತ್ರಾಲಯ ರಸ್ತೆ ಆಕಾಶವಾಣಿ ಕೇಂದ್ರದ ಎದುರು, ಐಡಿಎಸ್‌ಎಂಟಿ ಬಸ್‌ ನಿಲ್ದಾಣ ಪಕ್ಕದಲ್ಲಿ, ಐಬಿ ಕಾಲೋನಿ ಎದುರು, ನವೋದಯ ಕಾಲೇಜು ಕ್ಯಾಂಪಸ್‌ ಎದುರು, ಲಿಂಗಸುಗೂರು ಮಾರ್ಗದ ಅನೇಕ ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ವಾಹನ ಸವಾರರಿಗೆ ಗೋಚರಿಸುವ ರೀತಿಯಲ್ಲಿ ಮಾರ್ಕಿಂಗ್‌ ಮಾಡಿಲ್ಲ.

ಜಿಲ್ಲಾ ಕೋರ್ಟ್‌ ಎದುರು, ರಿಮ್ಸ್‌ ಎದುರು, ಚಂದ್ರಬಂಡಾ ರಸ್ತೆ, ಗೋಶಾಲಾ ರಸ್ತೆಗಳಲ್ಲಿ ಅಪಾಯಕಾರಿ ರಸ್ತೆ ಉಬ್ಬುಗಳಿವೆ. ಈ ಬಗ್ಗೆ ವಾಹನ ಸವಾರರು ಮುನ್ನಚ್ಚರಿಕೆ ವಹಿಸುವುದಕ್ಕೆ ಯಾವುದೇ ಫಲಕ ಅಥವಾ ಚಿಹ್ನೆಗಳನ್ನು ಹಾಕಿಲ್ಲ. ಹೀಗಾಗಿ ಬೈಕ್‌ ಸವಾರರು ಮುಗ್ಗರಿಸುವುದು ಸಾಮಾನ್ಯವಾಗಿದೆ.

ಸಂಚಾರ ನಿಯಮಗಳನ್ನು ಜನರು ಪಾಲನೆ ಮಾಡುವುದಕ್ಕೆ ಸಂಬಂಧಿಸಿದಂತೆ ಸೌಕರ್ಯಗಳ ನಿರ್ವಹಣೆ ಮಾಡುವುದು ಅಗತ್ಯವಿದೆ. ರಾಯಚೂರು ನಗರದಲ್ಲಿ ಪ್ರತ್ಯೇಕ ಸಂಚಾರ ಠಾಣೆ ಇದ್ದರೂ ವಾಹನ ದಟ್ಟಣೆ ನಿರ್ವಹಣೆ ಮತ್ತು ಅಪಘಾತ ತಡೆಯುವುದಕ್ಕೆ ಕೈಗೊಳ್ಳಬೇಕಿರುವ ಕೆಲಸವನ್ನು ಮಾಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಿಸಿಟಿವಿ ಕ್ಯಾಮರಾಗಳ ನಿರ್ವಹಣೆ, ರಸ್ತೆಗಳಲ್ಲಿ ಬೀದಿದೀಪಗಳನ್ನು ಅಳವಡಿಸುವುದು ಮತ್ತು ಸಂಚಾರ ಚಿಹ್ನೆಗಳನ್ನ ಹಾಕಿಸುವುದಕ್ಕೆ ಸಂಚಾರ ಠಾಣೆಯು ಪ್ರಸ್ತಾವನೆ ಸಿದ್ಧಪಡಿಸಿ ಸ್ಥಳೀಯ ಆಡಳಿತ ಸಂಸ್ಥೆಗೆ ನೀಡಿದೆ. ಇದುವರೆಗೂ ಅನುಮೋದನೆ ಆಗಿಲ್ಲ.

ಅಪಘಾತ ಹೆಚ್ಚಳ

ಲಿಂಗಸುಗೂರು: ಸ್ಥಳಿಯ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಸೇರಿದಂತೆ ಪಟ್ಟಣ ಸಂಪರ್ಕಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹಾಕಿರುವ ಅವೈಜ್ಞಾನಿಕ ಹಂಪ್ಸ್‌ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಳದ ಜೊತೆಗೆ ವಾಹನ ಸವಾರರು ಭಾರಿ ಸಂಕಷ್ಟ ಎದುರಿಸುವಂತಾಗಿದೆ.

ಪಟ್ಟಣದ ಮುಖ್ಯ ರಸ್ತೆಗಳ ಆಯಕಟ್ಟಿನ ಸ್ಥಳಗಳಲ್ಲಿ ಅಲ್ಲಲ್ಲಿ ಅತಿಯಾದ ಎತ್ತರದ ಹಂಪ್ಸ್‌ ಹಾಕಲಾಗಿದೆ. ಅಲ್ಲದೆ ಹಂಪ್ಸ್‌ ಮುಂಭಾಗ ಗುಂಡಿ ಅಗೆದಿರುವುದು ನಿತ್ಯ ಸವಾರರು ಎದ್ದು ಬಿದ್ದು ಹೋಗುವಂತಾಗಿದೆ. ಯಾವುದೇ ನಾಮಫಲಕ, ಸೂಚನಾ ಚಿಹ್ನೆ ಅಳವಡಿಸದೆ ಹೋಗಿದ್ದರಿಂದ ಸಣ್ಣ ಪುಟ್ಟ ಅಪಘಾತ ಸಂಭವಿಸಿ ಆಸ್ಪತ್ರೆ ಸೇರುವುದು ಸಾಮಾನ್ಯ ಸಂಗತಿಯಾಗಿದೆ.

ಪಟ್ಟಣ ಪ್ರದೇಶದ ಬಹುತೇಕ ರಸ್ತೆಗಳಲ್ಲಿ ಮಿತಿ ಮೀರಿದ ಹಂಪ್ಸ್‌ಗಳಿಂದ ವಾಹನ ಚಾಲಕರು ಹಿಡಿಶಾಪ ಹಾಕುವಂತಾಗಿದೆ. ಅವೈಜ್ಞಾನಿಕ ಹಂಪ್ಸ್‌ಗಳಿಗೆ ಕ್ಯಾಟ್‍ ಆಯ್ಸ್‌ ಅಳವಡಿಕೆ ಹಾಗೂ ಥರ್ಮೊ ಪ್ಲಾಸ್ಟಿಕ್‍ ಪೇಂಟ್‍ ಲೇಪನ, ಸೂಚನಾ ಫಲಕಗಳು ಹಾಕದಿರುವುದು ವಾಹನ ಚಾಲಕರನ್ನು ಕಂಗೆಡೆಸಿದೆ.

ರಾಷ್ಟ್ರೀಯ ಮತ್ತು ರಾಜ್ಯಹೆದ್ದಾರಿ ಮುಖ್ಯ ರಸ್ತೆಗಳನ್ನು ಪುರಸಭೆ ವ್ಯಾಪ್ತಿಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಹಂಪ್ಸ್‌ಗಳ ನಿರ್ವಹಣೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಗುಂಡಿಗಳ ಮುಚ್ಚುವುದು, ರಸ್ತೆ ದುರಸ್ತಿ ಸಮಸ್ಯೆಯಾಗಿ ಕಾಡುತ್ತಿದೆ. ಬಾರ್‌ಗಳಿಗೆ ಪರವಾನಿಗೆ ನೀಡುವಾಗ ತಂದಿರುವ ತಿದ್ದುಪಡಿ ಇಂತಹ ಅವಘಡಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಚಾಲಕರ ಆರೋಪ.

ಹತೋಟಿಗೆ ಬಾರದ ವಾಹನಗಳು

ದೇವದುರ್ಗ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ ಹೆಚ್ಚುತ್ತಿದೆ. ವಾರದ ಸಂತೆ ಶನಿವಾರ ದಿನದಂದು ಹತೋಟಿಗೆ ಬರುತ್ತಿಲ್ಲ. ಒಂದೆಡೆ ಕಾಯಿಪಲ್ಲೆ ಸಂತೆ­ಯ ಗದ್ದಲ. ಇನ್ನೊಂದೆಡೆ ವಾಹನ­ಗಳ ಶಬ್ದದ ಅಬ್ಬರ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಆಗುತ್ತಿಲ್ಲ. ಅಡ್ಡಾದಿಡ್ಡಿ ಚಲಿಸುವ ಬೈಕ್‌ ಸವಾರರು, ಆಟೊ ಚಾಲಕರು ನಿಯಂತ್ರಿಸಲಾಗುತ್ತಿಲ್ಲ.

ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸತತ ಯತ್ನಿಸಿದರೂ ಪ್ರಯೋಜನವಿಲ್ಲ. ಮಹಿಳೆಯರು, ವಯೋವೃದ್ಧರು ಅತ್ತಿಂದಿತ್ತ ರಸ್ತೆ ದಾಟಲು ಸಾಧ್ಯವಾಗದೆ ವ್ಯವಸ್ಥೆಗೆ ಹಿಡಿಶಾಪ ಹಾಕುವುದಕ್ಕೆ ಕೊನೆಯಾಗುತ್ತಿಲ್ಲ.

ಅಂಬೇಡ್ಕರ್ ವೃತ್ತ, ಎಚ್ ಝೆಡ್ ಪಿ ಸರ್ಕಲ್ ನಲ್ಲಿರುವ ಎಸ್‌ಬಿಐ ಬ್ಯಾಂಕ್ ಮುಂದುಗಡೆ ಯಾವುದೇ ಪಾರ್ಕಿಂಗ್ ಫಲಕ ಇಲ್ಲ. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತಾಕಾರದ ಹಂಪ್ಸ್ ಅಪಘಾತಕ್ಕೆ ಕಾರಣವಾಗುತ್ತಿದೆ.

ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಯಮುನೇಶ ಗೌಡಗೇರಾ

ಪೂರಕ ಮಾಹಿತಿ: ಡಿ.ಎಚ್‌.ಕಂಬಳಿ, ಬಿ.ಎ.ನಂದಿಕೋಲಮಠ, ಯಮುನೇಶ ಗೌಡಗೇರಾ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT