ಕಾಂಗ್ರೆಸ್‌ ಪ್ರಣಾಳಿಕೆಗೆ ಕಿಮ್ಮತ್ತಿಲ್ಲ: ಯಡಿಯೂರಪ್ಪ

ಬುಧವಾರ, ಏಪ್ರಿಲ್ 24, 2019
23 °C
ಸಿರವಾರದಲ್ಲಿ ಬಿಜೆಪಿ ಪ್ರಚಾರ ಸಭೆ

ಕಾಂಗ್ರೆಸ್‌ ಪ್ರಣಾಳಿಕೆಗೆ ಕಿಮ್ಮತ್ತಿಲ್ಲ: ಯಡಿಯೂರಪ್ಪ

Published:
Updated:
Prajavani

ರಾಯಚೂರು: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಈಚೆಗೆ ಬಿಡುಗಡೆ ಮಾಡಿರುವ ಚುನಾವಣೆ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದರು.

ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಮಂಗಳವಾರ ನಡೆದ ‘ವಿಜಯ ಸಂಕಲ್ಪ ಯಾತ್ರೆ’ಯಲ್ಲಿ ರಾಯಚೂರು ಲೋಕಸಭೆ ಅಭ್ಯರ್ಥಿ ಪರವಾದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ ನಾಯಕರ ಸುಳ್ಳು ಭರವಸೆಗಳನ್ನು ಜನರು ನಂಬುತ್ತಿಲ್ಲ. ಹೋದಲೆಲ್ಲ ಜನರೆಲ್ಲ ಮೋದಿ.. ಮೋದಿ... ಎಂಬ ಜಯಘೋಷ ಮಾಡುತ್ತಿದ್ದಾರೆ. ದೇಶದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಪ್ರಧಾನಿ ಬಗ್ಗೆ ಇಷ್ಟು ಅಭಿಮಾನ ವ್ಯಕ್ತವಾಗುತ್ತಿದೆ. ಈ ಹಿಂದೆ 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರ ಹೆಸರು ಯಾಕೆ ಜನ ಕೂಗುವುದಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದರೆ, ಮನಮೋಹನಸಿಂಗ್ ಅವರು ಸೋನಿಯಾಗಾಂಧಿ ಅವರ ಆಣತಿಯಂತೆ ಆಡಳಿತ ನಡೆಸಿದ್ದರು ಎಂದು ಹೇಳಿದರು.

ಈ ಚುನಾವಣೆಯಲ್ಲಿ ರಾಜ್ಯದಿಂದ 22 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ ಅವರು ಒಂದು ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವು ಕೋಮಾ ಸ್ಥಿತಿಯಲ್ಲಿದ್ದು, ಶೀಘ್ರದಲ್ಲೆ ಅಸ್ತಿತ್ವ ಕಳೆದುಕೊಳ್ಳಲಿದೆ. ಮಂಡ್ಯದಲ್ಲಿ ಮುಖ್ಯಮಂತ್ರಿ ತಮ್ಮ ಪುತ್ರನನ್ನು ಗೆಲ್ಲಿಸುವುದಕ್ಕೆ ಹಣದ ಹೊಳೆಯನ್ನೆ ಹರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ₹150 ಕೋಟಿ ಹಣ ವೆಚ್ಚವಾಗಲಿದೆ ಎನ್ನುವ ಅಂಶವು ಆಡಿಯೋದಲ್ಲಿ ಬಹಿರಂಗವಾಗಿದ್ದನ್ನು ಜನರು ಗಮನಿಸಿದ್ದಾರೆ. ಒಂದು ಕಾಲಕ್ಕೆ ಜೆಡಿಎಸ್‌ ಅಪ್ಪ–ಮಕ್ಕಳ ಪಕ್ಷವಾಗಿತ್ತು. ಆನಂತರ ಸೊಸೆ ಕೂಡಾ ರಾಜಕಾರಣಕ್ಕೆ ಬಂದರು. ಈಗ ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತರಲಾಗಿದೆ ಎಂದರು.

ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಈ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !