ಬುಧವಾರ, ಮಾರ್ಚ್ 22, 2023
20 °C
ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌– ಲೆನಿನ್‍ ವಾದಿ) ರೆಡ್‌ಸ್ಟಾರ್‌ ಸಂಘಟನೆ ಆಗ್ರಹ

ಎನ್ಆರ್‌ಬಿಸಿ: ಅಕ್ರಮ ಟೆಂಡರ್‌ ರದ್ದುಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಲಿಂಗಸುಗೂರು: ‘ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಅಣೆಕಟ್ಟೆ ವ್ಯಾಪ್ತಿಯ ನಂದವಾಡಗಿ, ನಾರಾಯಣಪುರ ಬಲದಂಡೆ ಮತ್ತು ವಿತರಣಾ ನಾಲೆಗಳ ಆಧುನೀಕರಣ, 9ಎ ವಿತರಣಾ ನಾಲೆಗಳ ಹೆಸರಲ್ಲಿ ನಡೆದಿರುವ ₹ 4,500 ಕೋಟಿ ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು‘ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌-ಲೆನಿನ್‍ ವಾದಿ)ರೆಡ್‍ ಸ್ಟಾರ್‌ ಆಗ್ರಹಪಡಿಸಿದೆ.

ಗುರುವಾರ ರಾಯಚೂರು ರಸ್ತೆಯ ವಿಸಿಬಿ ಕಾಲೇಜು ವೃತ್ತದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ ಕಾರ್ಯಕರ್ತರು, ನಂದವಾಡಗಿ, ರಾಂಪೂರ, ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯ ಎಲ್ಲಾ ಅಕ್ರಮ ಗುತ್ತಿಗೆಗಳನ್ನು ರದ್ದುಪಡಿಸಬೇಕು. ನಾರಾಯಣಪುರ ಬಲದಂಡೆ ನಾಲೆ 5ಎ ನಾಲೆ ಅನುಷ್ಠಾನಕ್ಕೆ ವರದಿ ಸಿದ್ಧಪಡಿಸಿ ಕೂಡಲೆ ಜಾರಿಗೊಳಿಸಲು ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನಂದವಾಡಗಿ ಯೋಜನೆ ಒಡಂಬಡಿಕೆ ಉಲ್ಲಂಘಿಸಿ ಹಣ ದುರುಪಯೋಗವಾಗಿದ್ದು, 90 ಸಾವಿರ ಎಕರೆ ಜಮೀನಿಗೆ ಜಲ ವಂಚನೆ ಮಾಡಿರುವ ಮೆ. ಲಾರ್ಸನ್‍ ಆ್ಯಂಡ್‍ ಟಬ್ರೊ, ಮೆ.ತಹಲ್‍ ಕನ್ಸಲ್ಟಿಂಗ್‍ ಗುರುಗಾಂವ್‍, ಮೆ.ಮೇಘಾ ಹೈದರಾಬಾದ್‌, ಮೆ. ಎನ್‍.ಡಿ ವಡ್ಡರ (ಮಾಜಿ ಶಾಸಕ ಮಾನಪ್ಪ ವಜ್ಜಲ ಸಹೋದರ ಕಂಪೆನಿ) ಕಂಪೆನಿಗಳ ವಿರುದ್ಧ ಕ್ರಿಮಿನಲ್‍ ಮೊಕದ್ದಮೆ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸುವ ಜೊತೆಗೆ ಸಂಬಂಧಿಸಿದವರಿಂದ ₹970 ಕೋಟಿ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯ ವಿತರಣಾ ನಾಲೆಗಳ ಆಧುನೀಕರಣ ಹೆಸರಲ್ಲಿ ಟೆಂಡರ್ ಆಗಿ, ಒಡಂಬಡಿಕೆ ಮಾಡಿ, ವರ್ಕ್‌ ಆದೇಶ ನೀಡಿ ₹ 1,466 ಕೋಟಿ ವಂಚನೆ ಮಾಡಿ ರಾಯಚೂರು, ಲಿಂಗಸುಗೂರು, ದೇವದುರ್ಗ ತಾಲ್ಲೂಕುಗಳ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಎನ್‍ಆರ್‌ಬಿಸಿ 9ಎ ಕಾಲುವೆ ಉದ್ಘಾಟನೆಗೆ ಮುಂಚೆಯೆ ಕೊಚ್ಚಿ ಹೋಗಿದೆ. ನಂದವಾಡಗಿ, ರಾಂಪೂರ, ನಾರಾಯಣಪುರ ಬಲದಂಡೆ ಕಾಲುವೆ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರ ನೀಡಿಲ್ಲ. ಕೂಡಲೇ ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಿಪಿಐ (ಎಂಎಲ್‍) ರೆಡ್‍ ಸ್ಟಾರ್ ಹಿರಿಯ ಮುಖಂಡ ಆರ್.ಮಾನಸಯ್ಯ ಮಾತನಾಡಿ, ‘ನಾರಾಯಣಪುರ ಬಲದಂಡೆ ನಾಲೆ, ವಿತರಣಾ ನಾಲೆಗಳ ನವೀಕರಣ, ನಂದವಾಡಗಿ, ರಾಂಪೂರ ಸೇರಿದಂತೆ ಇತರೆ ನೀರಾವರಿ ಅಕ್ರಮ ಟೆಂಡರ್ ಗುತ್ತಿಗೆಗಳನ್ನು ರದ್ದುಪಡಿಸಬೇಕು. ಈ ಹಗರಣಗಳ ತನಿಖೆಗೆ ಸದನ ಜಂಟಿ ಸದನ ಸಮಿತಿ ರಚನೆ ಮಾಡುವವರೆಗೆ ಅನಿರ್ದಿಷ್ಟ ಧರಣಿ ಮುಂದುವರೆಸಲಿದ್ದೇವೆ’ ಎಂದು ಹೇಳಿದರು.

ಮುಖಂಡರಾದ ಆರ್.ಮಾನಸಯ್ಯ, ಜಿ.ಅಮರೇಶ, ಚಿನ್ನಪ್ಪ ಕೊಟ್ರಿಕಿ, ತಿಪ್ಪರಾಜ, ಕುಪ್ಪಣ್ಣ ಹೊಸಮನಿ ಹಾಗೂ ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.