ಮಂಗಳವಾರ, ಮೇ 26, 2020
27 °C

ರಾಯಚೂರು | ಲಾಕ್‌ಡೌನ್ ಪರಿಣಾಮ: ಉಳಿದಿದೆ 2 ಕೆಜಿ ಅಕ್ಕಿ, ಇನ್ನೂ 16 ದಿನ ಬಾಕಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ‘ದಿನಕ್ಕೊಮ್ಮೆ ಅನ್ನಾ ಮಾಡ್ಕೊಂಡು ಅದರಲ್ಲಿ ಖಾರದಪುಡಿ ಹಾಕೊಂಡು ತಿಂತೀವಿ. ಊರೆಲ್ಲ ಬಂದ್‌ ಆಗಿರೋದು ಮತ್ಯಾವಾಗ ಶುರು ಆಗತೈತಿ’ ಎಂದು ಹರಕಲು ಬಟ್ಟೆ ಜೋ‍ಪಡಿ ಎದುರು ಕುಳಿತಿದ್ದ ಬಡೇಸಾಬ್‌ ಕೇಳಿದರು.

‘ದೇಶವೆಲ್ಲ ಲಾಕ್‌ಡೌನ್‌ ಆಗಿದೆ. ಊಟಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿರಿ’ ಎಂದು ಮೊದಲು ನಾನು ಕೇಳಿದ್ದಕ್ಕೆ ಮರಳಿ ನನಗೆ ಅವರು ಪ್ರಶ್ನೆ ಹಾಕಿದರು. ‘ಯಾವುದೋ ರೋಗ ಬಂದೈತಿ ಅಂಥ, ಎಲ್ಲಾ ಬಂದ್‌ ಮಾಡ್ಯಾರ’ ಎಂದು ಒಂದು ಮಾತು ಹೇಳಿದ್ದನ್ನು ಬಿಟ್ಟರೆ, ಕೊರೊನಾ ಸೋಂಕಿನ ಕುರಿತಾಗಿ ಅವರಿಗೆ ಹೆಚ್ಚಿನ ವಿಚಾರವೇ ಗೊತ್ತಿಲ್ಲ. ಅವರಲ್ಲಿ ಮೊಬೈಲ್‌ ಕೂಡಾ ಇಲ್ಲ.

ರಾಯಚೂರು ನಗರದಿಂದ 14 ಕಿಲೋ ಮೀಟರ್‌ ತುಂಟಾಪುರ ಕ್ರಾಸ್‌ ಹೆದ್ದಾರಿ ಪಕ್ಕದಲ್ಲಿ ಬಡೇಸಾಬ್‌ ಜೋಪಡಿ. ಪತ್ನಿ ಈರಮ್ಮ, 11 ವರ್ಷದ ಪುತ್ರ ಉರುಕುಂದಪ್ಪ ಮತ್ತು ಮೂರು ವರ್ಷ ಪುತ್ರಿ ಜೊತೆಯಲ್ಲಿದ್ದರು. ಬುಡ್ಗ ಜಂಗಮರ ಕುಲವೃತ್ತಿ ಹಗಲು ವೇಷ ಈಗ ನಿಂತುಹೋಗಿದೆ. ಕುಲವೃತ್ತಿಯಿಲ್ಲದೆ ಎಲ್ಲರೂ ಪ್ರತಿದಿನ ರಾಯಚೂರಿಗೆ ಭಿಕ್ಷೆ ಎತ್ತುವುದಕ್ಕೆ ಬಂದು ಹೋಗುತ್ತಿದ್ದರು. ಅದರಲ್ಲೇ ಉಪಜೀವನ ನಡೆಯಬೇಕು. ಕೊರೊನಾ ಸೋಂಕಿನ ಸಂಕಷ್ಟದಿಂದಾಗಿ ಈಗ ಭಿಕ್ಷೆ ಬೇಡಲು ಆಗುತ್ತಿಲ್ಲ.

‘ಎಷ್ಟ ದಿನಾ ಅದ್ರೂ ಅನ್ನಾ ತಿನ್ಕೊಂಡಿರ್ತಿವಿ. ಎಲ್ಲ ಜನ್ರೂ ತ್ರಾಸ್‌ನ್ಯಾಗ ಅದಾರು. ತುಂಟಾಪುರದಲ್ಲೂ ಯಾರ ಮನೆಗೆ ಹೋದ್ರೂ ಭಿಕ್ಷೆ ಸಿಗೋದಿಲ್ಲ. ನಮಗೂ ರೋಗ ಬರತೈತಿ ಅಂಥ ಹೆದರಿಕಿ ಆಗ್ಯಾದ. ಎಲ್ಲೂ ಹೊರಗೆ ಹೋಗೊದಿಲ್ಲ. ನೀರಾದ್ರೂ ಕುಂಡ್ಕೊಂಡು ಜೋಪಡಿಯಲ್ಲಿ ಇರ್ತಿವಿ’ ಎಂದು ಈರಮ್ಮ ಹೇಳಿದರು.

ಲಾಕ್‌ಡೌನ್‌ ಮುಗಿಯಲು ಇನ್ನೂ 16 ದಿನ ಬಾಕಿ ಇದೆ. ಜೋಪಡಿಯಲ್ಲಿ ಏನೇನು ದವಸಧಾನ್ಯ ಸಂಗ್ರಹವಿದೆ ಎಂದು ಇಣುಕಿದೆ. ಎರಡು ಕಿಲೋ ಅಕ್ಕಿಯ ಗಂಟು, ಖಾರದಪುಡಿ ಇರುವುದನ್ನು ತೋರಿಸಿದರು. ಮಣ್ಣಿನ ಗಡಿಗೆಯಲ್ಲಿ ಸಾಂಬಾರ ಮಾಡಿದ ಗುರುತು ಮಾತ್ರ ಇತ್ತು. ಅಂತ್ಯೋದಯ ರೇಷನ್‌ ಕಾರ್ಡ್‌ ಹೊಂದಿರುವ ಬಡೇಸಾಬ್‌ಗೆ ಈಗ ಪಡಿತರ ಪಡೆಯುವುದಕ್ಕೂ ಆಗುತ್ತಿಲ್ಲ. ರಾಯಚೂರಿನ ಮಂಗಳವಾರಪೇಟೆಯಲ್ಲಿ ನ್ಯಾಯಬೆಲೆ ಅಂಗಡಿ ಇದೆ.

ಹೊಟ್ಟೆ ತುಂಬ ಊಟ ಇಲ್ಲದಿದ್ದರೂ ಮುಖದಲ್ಲಿ ಜೀವಕಳೆ ಕಾಣುವುದಕ್ಕೆ ಬಯಲಿನ ಶುದ್ಧಗಾಳಿಯೊಂದೇ ಆಧಾರ. ಕೊರೊನಾ ಮಹಾಮಾರಿಯು ಇವರ ಬದುಕುವ ಶಕ್ತಿಯನ್ನು ಪರೀಕ್ಷಿಸುತ್ತಿದೆ. ಲಾಕ್‌ಡೌನ್‌ ಇದ್ದರೂ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಆದರೆ ಇವರ ಬಳಿ ಹಣವಿಲ್ಲ. ಭಿಕ್ಷೆಯಲ್ಲಿ ಬಂದಿದ್ದೆಲ್ಲವೂ ಅಂದಿನ ಬದುಕಿನ ಬವಣೆಗೆ ಮುಗಿದು ಹೋಗಿದೆ.

ತುಂಟಾಪುರ ಕ್ರಾಸ್‌ನಲ್ಲಿ ಇಂಥದ್ದೆ ಸಂಕಷ್ಟದ ಸ್ಥಿತಿ ಅನುಭವಿಸುತ್ತಿರುವ ನಾಲ್ಕು ಜೋಪಡಿಗಳಿವೆ. ಏಳು ವರ್ಷಗಳಿಂದ ಇದೇ ಬಯಲಿನಲ್ಲಿದ್ದಾರೆ. ರಾಯಚೂರು ನಗರದಲ್ಲಿ ಜಾಗ ಖಾಲಿ ಮಾಡಿಸಿದ ಬಳಿಕ ಅಲ್ಲಿ ಆಶ್ರಯ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು