ಮಂಗಳವಾರ, ಜುಲೈ 27, 2021
26 °C

ಮೂರು ತಿಂಗಳಲ್ಲಿ ಓಪೆಕ್‌ಗೆ ಹೊಸರೂಪ: ಸಚಿವ ಡಾ.ಕೆ.ಸುಧಾಕರ್‌ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಸೂಪರ್‌ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಗೆ ಮೂರು ತಿಂಗಳುಗಳಲ್ಲಿ ಹೊಸ ರೂಪ ಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್‌ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಭಾಗದ ಜನಪ್ರತಿನಿಧಿಗಳೆಲ್ಲ ಆಸ್ಪತ್ರೆ ಸ್ಥಗಿತವಾಗಿದ್ದರ ಬಗ್ಗೆ ಗಮನ ಸೆಳೆದಿದ್ದಾರೆ. ಖುದ್ದಾಗಿ ಭೇಟಿನೀಡಿದಾಗ ಸಮಸ್ಯೆಗಳು ಅರಿವಿಗೆ ಬಂದಿವೆ. ರಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲೂ ಕೆಲವು ನ್ಯೂನತೆಗಳು ಕಂಡುಬಂದಿವೆ. ಅವುಗಳನ್ನು ಸರಿಪಡಿಸುವಂತೆ ನಿರ್ದೇಶಕರಿಗೆ ಸೂಚಿಸಲಾಗಿದೆ. ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಸಲು ತಿಳಿಸಲಾಗಿದೆ ಎಂದರು.

ಜಿಲ್ಲಾಕೇಂದ್ರಗಳಲ್ಲಿ ವೈದ್ಯಕೀಯ ಸಂಸ್ಥೆ ಸ್ಥಾಪಿಸುವ ಮೂಲ ಉದ್ದೇಶವೆ, ಜನರಿಗೆಲ್ಲ ಉತ್ತಮ ಆರೋಗ್ಯ ಸೇವೆ ದೊರಕಲಿ ಎಂದು. ಅದು ಈಡೇರಲೇ ಬೇಕು. ವೈದ್ಯಕೀಯ ಸಂಸ್ಥೆಯಲ್ಲಿ ಎಲ್ಲ ರೀತಿಯ ಸೇವೆಗಳು ‌‌ಸಿಗಬೇಕು. ಆರೋಗ್ಯದ ವಿಷಯದಲ್ಲಿ ಅದು ಮಹತ್ವದ ಸಂಸ್ಥೆಯಾಗಿರಬೇಕು ಎಂದು ತಿಳಿಸಿದರು.

ರಾಯಚೂರಿನಲ್ಲಿಯೂ ಕೋವಿಡ್‌ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸದ್ಯ ದಾಖಲಾದ 278 ಸೋಂಕಿತರಲ್ಲಿ ಆರು ಜನರಿಗೆ ಮಾತ್ರ ರೋಗ ಲಕ್ಷಣಗಳಿವೆ. ಐಸಿಯುವರೆಗೂ ಹೋಗುವ ಮೊದಲೇ ಚಿಕಿತ್ಸೆ ನೀಡಬೇಕು. ಇದು ಮಳೆಗಾಲ ಆರಂಭ ಆಗಿರುವುದರಿಂದ ಜ್ವರ, ನೆಗಡಿ, ಕೆಮ್ಮು ಹಾಗೂ ಹಸಿವು‌ ಕಡಿಮೆ ಆಗುತ್ತಿದ್ದವರು ಸ್ವಯಂ ಪ್ರೇರಣೆಯಿಂದ ಚಿಕಿತ್ಸಾ ಕೇಂದ್ರಕ್ಕೆ ಬರಬೇಕು. ಇತರೆ ಕಾಯಿಲೆ ಇದ್ದವರಿಗೂ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕೋವಿಡ್‌ ಸೋಂಕು ತಡೆಗೆ ಜನಸಾಮಾನ್ಯರು ಕೈಜೋಡಿಸಬೇಕು. ನಿತ್ಯ ಜೀವನದಲ್ಲಿ ಕೆಲವು ಬದಲಾವಣೆ ಅಳವಡಿಸಿಕೊಳ್ಳಬೇಕು. ಭಯಪಡುವ ಅಗತ್ಯವಿಲ್ಲ. ಬರೀ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡರೆ ಸಾಕು. ಸೋಂಕಿನ ತೀವ್ರತೆ ಆಧರಿಸಿ ದಿನವೂ ನಿಯಮಗಳನ್ನು ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಮಟ್ಟದಲ್ಲಿಯೂ ಸೋಂಕು ತಗುಲಿದ ಶೇ 95 ರಷ್ಟು ಜನರಿಗೆ ರೋಗದ ಲಕ್ಷಣಗಳಿಲ್ಲ. ಜನರಲ್ಲಿರುವ ಆತಂಕವನ್ನು ದೂರ ಮಾಡಲು ಇಂತಹ ವಿಷಯವನ್ನು ಹೆಚ್ಚು ಪ್ರಚಾರ ಮಾಡಬೇಕು. ಭಯ ಹೋಗಲಾಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ವಾಸ್ತವಾಂಶ ಹೆಚ್ಚು ಪ್ರಚಾರ ಮಾಡಬೇಕು. ಕೊರೊನಾ ಭಯಾನಕ ವೈರಾಣು ಅಲ್ಲ. ಚಿಕಿತ್ಸೆ ಇಲ್ಲದೆಯೂ ಗುಣಮುಖರಾಗುತ್ತಿದ್ದಾರೆ. ಮುನ್ನಚ್ಚರಿಕೆ ತೆಗೆದುಕೊಂಡರೆ ಶೇ 80 ರಷ್ಟು ರೋಗ ಕಡಿಮೆ ಆಗುತ್ತದೆ.

ರೋಗದ ಲಕ್ಷಣ ಇದ್ದವರನ್ನು ತಪಾಸಣೆ ಮಾಡಬೇಕು. ಬೇರೆ ರಾಜ್ಯಗಳಿಂದ ಬರುವವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕು ತಗುಲಿದವರ ಮನೆ ಮಾತ್ರ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗುತ್ತಿದೆ. ರಾಯಚೂರಿಗೆ ಬೇರೆ ರಾಜ್ಯಗಳಿಂದ ಜನರು ಬರುತ್ತಿದ್ದು, ಮುಖ್ಯವಾಗಿ ಮಹಾರಾಷ್ಟ್ರದಿಂದ ಬಂದವರನ್ನು ಗುರುತಿಸಿ ಕ್ವಾರಂಟೈನ್‌ ಮಾಡಬೇಕು ಎಂದು ಹೇಳಿದರು.

ಓಪೆಕ್‌ ಆಸ್ಪತ್ರೆಯನ್ನು ಸುಧಾರಿಸಿ, ಮರು ಆರಂಭ ಮಾಡಬೇಕು ಎಂದು ಶಾಸಕರಾದ ಬಸನಗೌಡ ದದ್ದಲ, ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ ಅವರು ಸಚಿವರನ್ನು ಕೋರಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಅವರು ಕೋವಿಡ್‌ ವಸ್ತುಸ್ಥಿತಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು