ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಹೆಸರಲ್ಲಿ ಪಂಚಮಸಾಲಿಗಳಿಗೆ ವಂಚನೆ: ವಿಜಯಾನಂದ ಕಾಶಪ್ಪನವರ

ಸುವರ್ಣ ವಿಧಾನಸೌಧ ಕಬ್ಜಾ ಪಡೆದು ಮೀಸಲಾತಿ ಯಶಸ್ವಿಗೆ ತೀರ್ಮಾನ: ವಿಜಯಾನಂದ ಕಾಶಪ್ಪನವರ
Last Updated 28 ನವೆಂಬರ್ 2022, 6:50 IST
ಅಕ್ಷರ ಗಾತ್ರ

ಲಿಂಗಸುಗೂರು: ‘ನಾವುಗಳೆಲ್ಲ ಹಿಂದೂ ಧರ್ಮದಲ್ಲಿ ಜನ್ಮ ತಳೆದಿದ್ದರೂ ಕೂಡ ನೈಜ ಜಾತಿ ಪಂಚಮಸಾಲಿ ಎಂದು ದಾಖಲೀಕರಣ ಮಾಡಿಲ್ಲ. ಈ ಹಿಂದಿನ ರಾಜಕಾರಣಿಗಳು, ಖಾವಿಧಾರಿಗಳು ಲಿಂಗಾಯತರು ಎಂದು ನಮೂದಿಸಲು ಹೇಳುತ್ತ ಪಂಚಮಸಾಲಿ ಸಮಾಜಕ್ಕೆ ವಂಚನೆ ಮಾಡಿದ್ದಾರೆ’ ಎಂದು ವಿಜಯ ಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ರಾಯಚೂರು ಜಿಲ್ಲಾ ಮಟ್ಟದ ಪಂಚಮಸಾಲಿ 2(ಎ) ಮೀಸಲಾತಿ ಮತ್ತು ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಿಂದ ಒಬಿಸಿ ಮೀಸಲಾತಿ ಹಕ್ಕೊತ್ತಾಯ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದಾಖಲೆಗಳಲ್ಲಿ ಕೇವಲ ಲಿಂಗಾಯತರೆಂದು ಬರೆಯಿಸಿದ್ದ ರಿಂದ ಮೀಸಲಾತಿ ಹಕ್ಕು ಪಡೆಯುವುದು ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ತಾವು ಗಳು ಹಿಂದೂ ಪಂಚಮಸಾಲಿ ಎಂದು ದಾಖಲಿಸಬೇಕು’ ಎಂದು ಸೂಚಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 19ರ ಒಳಗಡೆ 2 (ಎ) ಮೀಸಲಾತಿ ಘೋಷಿಸುವ ಭರವಸೆ ನೀಡಿದ್ದಾರೆ. ಅಧಿವೇಶನಕ್ಕೆ ಮುಂಚೆ ಮೀಸಲಾತಿ ಘೋಷಿಸದಿದ್ದರೆ ಡಿ. 22ರಂದು ಬೆಳಗಾವಿ ಸುವರ್ಣಸೌಧ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜಯ ಸಿಕ್ಕರೆ ಮುಖ್ಯಮಂತ್ರಿಗೆ ಸನ್ಮಾನ, ಜಯ ಸಿಗದಿದ್ದರೆ ಅವಮಾನ ಮಾಡಲು ತೀರ್ಮಾನಿಸಿದೆ. ಕಾರಣ ಸಮಾಜದ ಜನ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸ ಬೇಕು’ ಎಂದು ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ 2 ವರ್ಷಗಳಿಂದ ಮೀಸಲಾತಿ ಹೋರಾಟ ನಡೆಸುತ್ತ ಬಂದಿದ್ದೇವೆ. ಅಂತಿಮ ಹಂತದ ಹೋರಾಟಕ್ಕೆ ಬಂದಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿಗೆ ನಡೆದುಕೊಳ್ಳದಿದ್ದರೆ ಡಿ. 22ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕಿ ಕಬ್ಜಾ ಹೊಂದಿ ಹೋರಾಟ ಯಶಸ್ವಿಗೆ ಪಣ ತೊಟ್ಟಿದ್ದೇವೆ’ ಎಂದು ಘೋಷಿಸಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಎಚ್‍.ಎಸ್‍. ಶಿವಶಂಕರ, ಮುಖಂಡರಾದ ಶಂಕರಗೌಡ ಪಾಟೀಲ ಅಮರಾವತಿ, ಮಹಾಂತೇಶ ಪಾಟೀಲ ಮಾತನಾಡಿ, ‘1994ರಿಂದ ಕುಂಟುತ್ತ ತೆವಳುತ್ತ ಸಂಘಟನೆ ಕಾರ್ಯ ನಡೆಸುತ್ತ ಬಂದಿದ್ದೆವು. ಆದರೆ, ಕೂಡಲಸಂಗಮ ಸ್ವಾಮೀಜಿಗಳ ಕ್ರಿಯಾಶೀಲತೆಯಿಂದ ರಾಜ್ಯವ್ಯಾಪಿ ಲಕ್ಷಾಂತರ ಪಂಚಮಸಾಲಿ ಬಂಧುಗಳು ಸಂಘಟಿತರಾಗಿ ಮುಂದೆ ಬಂದಿದ್ದಾರೆ. ಮೀಸಲಾತಿ ಹೋರಾಟ ಯಶಸ್ವಿಗೊಳ್ಳಲಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ‘ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಡಿಸೆಂಬರ್ 19ರೊಳಗಡೆ ಮೀಸಲಾತಿ ಘೋಷಣೆ ಮಾಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ. ಮೀಸಲಾತಿ ಘೋಷಣೆ ಆದರೆ ಡಿ.22ಕ್ಕೆ ಬೆಳಗಾವಿ ಸುವರ್ಣಸೌಧ ಬಳಿ ವಿಜಯೋತ್ಸವ ಆಚರಣೆ ಮಾಡೋಣ, ಘೋಷಣೆ ಆಗದಿದ್ದರೆ ಅನಿರ್ದಿಷ್ಟ ಪ್ರತಿಭಟನೆ ನಡೆಸೋಣ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಂಗಮರಳ್ಳಿಯ ಚಂದ್ರಮೌನೇಶ ತಾತ ನೇತೃತ್ವ ವಹಿಸಿದ್ದರು. ಪಂಚಮ ಸಾಲಿ ಸಮಾಜದ ಅಧ್ಯಕ್ಷ ಅಮರೇಶ ತಾವರಗೇರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ವಿಜಯಕುಮಾರ ಹೊಸಗೌಡ್ರ, ವಿಜಯಲಕ್ಷ್ಮಿ ದೇಸಾಯಿ, ಸಂಗನಗೌಡ ಮಸ್ಕಿ, ಸಿದ್ಧರಾಮೇಶ್ವರ ಸಿಂಧನೂರು, ಮಲ್ಲನಗೌಡ ತಾವರಗೇರ, ಚಂದ್ರಶೇಖರ, ಮಹಾಂತ ಗೌಡ, ಗಂಗನಗೌಡ, ಬಸಲಿಂಗಪ್ಪ ಮುಧೋಳ, ಪಂಪನಗೌಡ, ಅಮರೇಶ ನಾಗೂರು, ರಾಜಶೇಖರ ಪಾಟೀಲ, ಕಳಕನಗೌಡ ಕೊಪ್ಪಳ, ನಾಗರಾಜಗೌಡ, ಶರಣಬಸವ ವ್ಯಾಕರನಾಳ, ಅಮರೇಶ ಹೆಸರೂರು, ಸಿ.ಸಿ ಕರಡಕಲ್ಲ, ಆದೇಶ ಹೆರೂರು, ಮಲ್ಲಿಕಾರ್ಜುನ ನಾಡಗೌಡ್ರ, ಶ್ವೇತಾ ಮೇಟಿ, ಶಿವಮ್ಮ ಪಟ್ಟದಕಲ್ಲ ಸೇರಿ ದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT