ಬಾಕಿ ವೇತನ ಪಾವತಿ, ಸೇವೆಯಲ್ಲಿ ಮುಂದುವರೆಸಲು ಒತ್ತಾಯ

7
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ

ಬಾಕಿ ವೇತನ ಪಾವತಿ, ಸೇವೆಯಲ್ಲಿ ಮುಂದುವರೆಸಲು ಒತ್ತಾಯ

Published:
Updated:
Deccan Herald

ರಾಯಚೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಹಾಗೂ ಕಾವಲುಗಾರರ 11 ತಿಂಗಳ ಬಾಕಿ ವೇತನ ಪಾವತಿಸಿ, ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಅಡುಗೆ ಸಿಬ್ಬಂದಿ ಹಾಗೂ ಕಾವಲುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಳೆದ 15ರಿಂದ 25ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೈಬಿಟ್ಟು ಏಕಾಏಕಿಯಾಗಿ ಗುತ್ತಿಗೆ ಆಧಾರದ ಮೇಲೆ ನೂತನ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಯ ಕುಟುಂಬಗಳು ಬೀದಿಪಾಲಾಗುವಂತಾಗಿದೆ ಎಂದು ಆರೋಪಿಸಿದರು.

ಆದ್ದರಿಂದ ವರ್ಷಗಳ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಯುನಿಟ್‌ ಪದ್ಧತಿಯಲ್ಲಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಈಗಿರುವ ಸಿಬ್ಬಂದಿಯನ್ನು ಮುಂದುವರೆಸಲು ಸೂಕ್ತ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸಿಬ್ಬಂದಿಯ ವೇತನವನ್ನು ₹16 ಸಾವಿರದಂತೆ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಆದರೆ, ಸಿಬ್ಬಂದಿಗೆ ತಿಂಗಳಿಗೆ ₹9,500 ವೇತನ ಪಾವತಿಸಲಾಗುತ್ತಿದ್ದು, ದುಡಿಯುವ ವರ್ಗದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ವರ್ಷಗಳಿಂದ ದುಡಿಯುವ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದು ಹಾಕದೇ ಸೇವೆಯಲ್ಲಿ ಮುಂದುವರೆಸಿ ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಯುನಿಟ್ ಪದ್ಧತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವಸತಿ ನಿಲಯಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ತುಂಡು ಗುತ್ತಿಗೆ ಕೆಲಸಗಾರರಿಗೆ ಇಲಾಖೆಯಿಂದ ವೇತನ ಮಂಜೂರು ಮಾಡಬೇಕು. ಸರ್ಕಾರದಿಂದ ಹೆಚ್ಚಿನ ವೇತನ ಪಡೆಯುವ ಗುತ್ತಿಗೆದಾರರ ಸಿಬ್ಬಂದಿಗೆ ಕಡಿಮೆ ವೇತನವನ್ನು ನೀಡುತ್ತಾರೆ. ಗುತ್ತಿಗೆ ಪದ್ಧತಿಯಿಂದ ಗುತ್ತಿಗೆದಾರರಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ಹಾಗೂ ದುಡಿಯುವ ವರ್ಗದವರಿಗೆ ಯಾವುದೇ ಪ್ರಯೋಜವಿಲ್ಲ ಎಂದು ದೂರಿದರು.

ನರಸಿಂಹಲು ನೆಲಹಾಳ, ಎಂ.ಈರಣ್ಣ, ನರಸಿಂಹಲು ಗಧಾರ, ಲಕ್ಷ್ಮೀದೇವಿ, ನರಸಿಂಗಮ್ಮ, ಉರುಕುಂದಮ್ಮ, ಬಾಬು, ಸಾಧಿಕ್, ಈರಮ್ಮ, ಮಾರೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !