ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೊರೊನಾ ಭೀತಿಯಲ್ಲೂ ಮಾನವೀಯ ಸ್ಪಂದನೆ

ನಿರ್ಗತಿಕರಿಗೆ, ಕರ್ತವ್ಯನಿರತರಿಗೆ ಊಟ, ಉಪಹಾರದ ಉಪಚಾರ
Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರಾಯಚೂರು: ಕೊರೊನಾ ವೈರಸ್‌ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿ ಇರುವ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಹಾಗೂ ನಿರ್ಗತಿಕರಾಗಿ ಅಲೆಯುವ ಜನರಿಗೆ ನಗರದ ಸಂಘ–ಸಂಸ್ಥೆಗಳು, ಗೆಳೆಯರ ಬಳದವರು ಪ್ರತಿನಿತ್ಯ ಊಟ, ಉಪಹಾರ ಹಂಚುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಕರ್ತವ್ಯ ನಿರತ ಪೊಲೀಸರು ಅನಗತ್ಯ ಸಂಚರಿಸುವವರ ಮೇಲೆ ಲಾಠಿ ಬೀಸಿದ್ದು, ಬಸ್ಕಿ ಹೊಡೆಸಿದ್ದು ಹಾಗೂ ಬೈಕ್‌ ಜಪ್ತಿ ಮಾಡಿಕೊಂಡಿರುವ ವಿಡಿಯೋ ತುಣುಕುಗಳು ವೈರಲ್‌ ಆಗುತ್ತಿವೆ. ಇದರೊಂದಿಗೆ ಬಿಸಿಲಲ್ಲಿ ಬಸವಳಿದ ಪೊಲೀಸರಿಗೆ ಮಜ್ಜಿಗೆ, ಶರಬತ್‌, ಬಿಸ್ಕಿಟ್‌ ಹಾಗೂ ಆಹಾರ ಪೊಟ್ಟಣಗಳನ್ನು ಕೊಟ್ಟು, ಅವರೊಂದಿಗೆ ಧನ್ಯತಾಭಾವದಲ್ಲಿ ಛಾಯಾಚಿತ್ರಗಳನ್ನು ತೆಗೆಸಿಕೊಂಡಿರುವುದು ಕೂಡಾ ಸ್ಥಳೀಯವಾಗಿ ವೈರಲ್‌ ಆಗುತ್ತಿವೆ.

ಲಾಕ್‌ಡೌನ್‌ ಆದೇಶದ ಮರುದಿನದಿಂದಲೇ ರೈಲ್ವೆ ನಿಲ್ದಾಣ, ಮಾವಿನಕೆರೆ, ಗಂಜ್‌ ಎಪಿಎಂಸಿ, ಪಟೇಲ್‌ ವೃತ್ತ, ಮಾರ್ಕೆಟ್‌, ವಾಸವಿನಗರ, ನವೋದಯ ಕ್ಯಾಂಪಸ್‌ಗಳಲ್ಲಿ ನಿರ್ಗತಿಕರನ್ನು ಹುಡುಕಿ ಆಹಾರದ ಪೊಟ್ಟಣಗಳನ್ನು ಹಂಚುತ್ತಿರುವುದು ಕಂಡುಬಂತು. ಆರಂಭದ ದಿನಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಊಟ, ಉಪಹಾರ ಕೊಡಲಾಯಿತು. ಕ್ರಮೇಣ ಈ ಉತ್ಸಾಹ ಕುಗ್ಗಬಹುದು ಅಂದುಕೊಳ್ಳಲಾಗಿತ್ತು. ಆದರೆ, ಈಗಲೂ ಸಹೃದಯ ದಾನಿಗಳು ಆಹಾರವಿಲ್ಲವರಿಗೆ ಆಹಾರ ಹಾಗೂ ಕಡುಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು ವಿಶೇಷ.

ಪ್ರತಿವರ್ಷ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀರು, ಶರಬತ್‌ ಹಂಚುತ್ತಿದ್ದ ಜೈನ್‌ ಸಂಘಟನೆಗಳು ಈ ವರ್ಷ ಸಂಚರಿಸಿ ಉಪಚರಿಸುತ್ತಿವೆ. ‘ಇಫಾ’ ಸಂಸ್ಥೆಯು ರಿಮ್ಸ್‌ನಲ್ಲಿ ಪ್ರತಿದಿನ ಮಧ್ಯಾಹ್ನ ರೋಗಿಗಳ ಸಂಬಂಧಿಗಳಿಗೆ ಎಂದಿನಂತೆ ಆಹಾರ ವಿತರಿಸುತ್ತಿದೆ.

ರಾಯಚೂರಿನ ಕಲಾಸಂಕುಲ ಸಂಸ್ಥೆ, ಶಶಿಧರ–ಸುರೇಶ ಗೆಳೆಯರು, ದಿಲೀಪ್‌–ಅವರ ಸ್ನೇಹಿತರು, ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾ ಘಟಕ, ನಗರಸಭೆ ಸದಸ್ಯರಾದ ಲಲಿತಾ ಕಡಗೋಲ್‌ ಆಂಜಿನೇಯ್ಯ, ಸಾಜಿದ್‌ ಸಮೀರ್‌, ಇಸ್ಪಾಕ್‌ ಪೆಟ್ರೊಲ್‌ ಬಂಕ್‌, ಪೂರ್ಣಿಮಾ ಟ್ರಸ್ಟ್‌, ಚಿತ್ರನಟ ರಾಮಾಚಾರಿ ಗೆಳೆಯರ ತಂಡ, ಶಾಸಕ ಡಾ.ಶಿವರಾಜ ಪಾಟೀಲ, ಅಖಿಲ ಭಾರತ ಬ್ರಾಹ್ಮಣ ಸಂಘ, ಶಂಕರಗೌಡ ಚಂದ್ರಗೌಡ, ಡಿ.ಸೋಮಶೇಖರ್ ಗುರುಶ್ರೀಕರ್ ಸೇರಿದಂತೆ ಅನೇಕರು ಆಹಾರ ಪೊಟ್ಟಣ, ಆಹಾರ ಸಾಮಗ್ರಿ ವಿತರಿಸಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕು, ಪಟ್ಟಣ ಹಾಗೂ ಹೋಬಳಿಗಳನ್ನು ದಾನಿಗಳು ಮಾನವೀಯತೆ ಮೆರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT