ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬವಣೆ ನಿಗಲು ಗಣೇಶನಿಗೆ ಮೊರೆ; ಅದ್ಧೂರಿ, ಆಡಂಬರವಿಲ್ಲದೆ ಪೂಜೆಗೆ ತಯಾರಿ

Last Updated 31 ಆಗಸ್ಟ್ 2019, 13:13 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಆರ್ಥಿಕ ವ್ಯವಹಾರಗಳ ಮೇಲೆ ಬರದ ಛಾಯೆ ಆವರಿಸಿರುವುದರಿಂದ ಗಣೇಶೋತ್ಸವ ಮಾಡುವುದಕ್ಕೆ ಪ್ರತಿವರ್ಷ ಕಾಣುತ್ತಿದ್ದ ಸಂಭ್ರಮ, ಸಡಗರದ ವಾತಾವರಣ ಕಾಣುತ್ತಿಲ್ಲ. ಆದರೆ, ಗಣೇಶೋತ್ಸವ ಆಚರಿಸುವುದನ್ನು ಕೈಬಿಡಬಾರದು ಎನ್ನುವ ಭಕ್ತಿಭಾವದಿಂದ ಉತ್ಸವ ಸಮಿತಿಗಳು ಎಲ್ಲ ಕಡೆಗೂ ತಯಾರಿ ಮಾಡಿಕೊಂಡಿವೆ.

ಬರಗಾಲದ ವಿಘ್ನಗಳನ್ನು ವಿನಾಶ ಮಾಡುವಂತೆ ಗಣೇಶನಿಗೆ ಮೊರೆ ಇಟ್ಟು ಪೂಜಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವ್ಯಾಪಾರಿಗಳಿಂದ ಕೂಡಿದ ಗಜಾನನ ಸಮಿತಿ ವತಿಯಿಂದ ತಿನ್‌ ಕಂದಿಲ್‌ನಲ್ಲಿ ಈ ವರ್ಷ ‘ಮುಂಬೈನ ಸಿದ್ಧಿವಿನಾಯಕ’ ಮಾದರಿ ಗಣೇಶನನ್ನು ವಿನ್ಯಾಸ ಮಾಡಲಾಗಿದೆ. ಲೋಹರವಾಡಿಯಲ್ಲೂ ವಿಶೇಷ ಕಲಾಕೃತಿಯೊಂದನ್ನು ನಿರ್ಮಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಗಣೇಶನನ್ನು ಪ್ರತಿಷ್ಠಾಪಿಸಲು ಮುಂದಾಗಿರುವ ವಿವಿಧ ಬಡಾವಣೆಗಳ ಗೆಳೆಯರ ಬಳಗದವರು ಇನ್ನೂ ಅನುಮತಿ ಪಡೆದುಕೊಳ್ಳುವ ತರಾತುರಿಯಲ್ಲಿರುವುದು ಶನಿವಾರ ಕಂಡುಬಂತು. ಈಗಾಗಲೇ 80 ಗಣೇಶ ಸಮಿತಿಯವರು ಅನುಮತಿ ಪಡೆದಿವೆ.

ಅನುಮತಿ ಪಡೆದಿರುವ ಗಣೇಶ ಉತ್ಸವ ಸಮಿತಿಯವರು ಆಯಾ ಬಡಾವಣೆಗಳಲ್ಲಿ ವೇದಿಕೆಗಳನ್ನು ನಿರ್ಮಾಣ ಮಾಡಿದ್ದು, ಸೋಮವಾರ ಗಣೇಶನನ್ನು ಪ್ರತಿಷ್ಠಾಪಿಸಲಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ನೈಸರ್ಗಿಕ ಗಣೇಶನನ್ನು ಪ್ರತಿಷ್ಠಾಪಿಸುವಂತೆ ಪೊಲೀಸರು, ನಗರಸಭೆ ಅಧಿಕಾರಿಗಳು ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ದೊಡ್ಡ ಪಿಒಪಿ ಮೂರ್ತಿಗಳ ಬದಲಾಗಿ ಸಣ್ಣ ಗಾತ್ರದ ಪಿಒಪಿ ಮೂರ್ತಿ ಪ್ರತಿಷ್ಠಾಪಿಸುವುದಕ್ಕೆ ಈಗಾಗಲೇ ಕೆಲವು ಗೆಳೆಯರ ಬಳಗಗಳು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಗಳಿಂದ ಗಣೇಶನನ್ನು ತಂದಿಟ್ಟುಕೊಂಡಿದ್ದಾರೆ.

ಒಂದೇ ಸೂರಿನಡಿ ಅನುಮತಿ: ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗಳಿಗೆ ಅನುಮತಿ ನೀಡಲು ಈ ವರ್ಷ ಒಂದೇ ಸೂರಿನ ವ್ಯವಸ್ಥೆ ಮಾಡಿರುವುದು ವಿಶೇಷ. ಸದರ್‌ ಪೊಲೀಸ್‌ ಠಾಣೆಯ ಆವರಣದಲ್ಲಿ ನಗರಸಭೆ ಅಧಿಕಾರಿಗಳು, ಅಗ್ನಿಶಾಮಕ ದಳದವರು ಹಾಗೂ ಜೆಸ್ಕಾಂ ಅಧಿಕಾರಿಗಳು ಹಾಜರಿದ್ದು, ಶುಲ್ಕ ಪಡೆದುಕೊಂಡು ಅನುಮತಿ ನೀಡುತ್ತಿದ್ದಾರೆ. ಅಗ್ನಿಶಾಮಕ ದಳದ ಸೇವೆಯನ್ನು ಅಗತ್ಯ ಇದ್ದವರು ಬಳಸಿಕೊಳ್ಳಬಹುದು. ₹5 ಸಾವಿರ ಶುಲ್ಕ ಭರಿಸಿದರೆ, ಮುನ್ನಚ್ಚರಿಕೆ ಕ್ರಮವಾಗಿ ಒಂದು ಟ್ಯಾಂಕರ್ ನಿಲುಗಡೆ ಮಾಡಲಾಗುತ್ತದೆ.

ದರ ಅಲ್ಪ ಏರಿಕೆ: ಗಣೇಶನನ್ನು ಅಲಂಕರಿಸಲು ಬಳಸುವ ಕೃತಕ ಹೂವುಗಳು, ಮುತ್ತಿನ ಹಾರಗಳು, ಹೊಳೆಯುವ ಕಾಗದ ಸಾಮಗ್ರಿಗಳ ದರ ಅಲ್ಪ ಏರಿಕೆಯಾಗಿದೆ. ಎಲ್ಲ ಸಾಮಗ್ರಿಗಳ ದರ ಸಾಮಾನ್ಯವಾಗಿ ₹5 ರಿಂದ ₹10 ಹೆಚ್ಚಿದೆ. ಖರೀದಿ ಕೂಡಾ ಪ್ರತಿವರ್ಷದಂತೆ ಆಗುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಅನಿಸಿಕೆ. ದೊಡ್ಡ ಹೂವಿನಹಾರ ಖರೀದಿಸುವವರು ಸಣ್ಣ ಹಾರ ತೆಗೆದುಕೊಳ್ಳುತ್ತಿದ್ದಾರೆ. ಸರಾಫ್‌ ಬಜಾರ್‌ ಮಾರ್ಗದ ಬೆರಳೆಣಿಕೆ ಮಳಿಗೆಗಳಲ್ಲಿ ಮಾತ್ರ ಗಣೇಶನ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟಕ್ಕೆ ತೂಗು ಹಾಕಲಾಗಿದೆ.

ಒಳ್ಳೆಯ ಕಾರ್ಯ

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘಗಳು ಅನುಮತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿರುವುದು ಒಳ್ಳೆಯದು. ಇದರಿಂದ ಭದ್ರತೆ ಸಿಗುತ್ತದೆ. ಪೊಲೀಸರದ್ದು ಒಳ್ಳೆಯ ಕಾರ್ಯ.

–ಗೋವರ್ಧನ್‌, ವೀರಕೇಸರಿ ಸಂಘ, ವಿದ್ಯಾನಗರ

ಉತ್ಸಾಹ ಕಡಿಮೆ

22 ವರ್ಷಗಳಿಂದ ಗಣೇಶ ಉತ್ಸವ ಮಾಡುತ್ತಿದ್ದೇವೆ. ಈ ಸಲ ಸಂಭ್ರಮ ಅಷ್ಟೊಂದು ಕಾಣುತ್ತಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಹಬ್ಬ, ಹರಿದಿನ ಗಣೇಶನ ಉತ್ಸವಗಳನ್ನು ನಡೆಸುವುದು ಕಷ್ಟವಾಗಿದೆ. ಪೊಲೀಸರು ಕೆಲವು ನಿಯಮಗಳನ್ನು ಮಾಡಿದ್ದು ಸ್ವಾಗತಾರ್ಹ.

ವೆಂಕಟೇಶ ಯಾದವ್‌, ತೋಟದ ಸಂಘ

ವ್ಯಾಪಾರವಿಲ್ಲ

ಪ್ರತಿವರ್ಷದಷ್ಟು ಈ ವರ್ಷ ಗಣೇಶ ವಿಗ್ರಹಗಳ ಬುಕಿಂಗ್‌ ಆಗಿಲ್ಲ. ಕೆಲವು ಯುವಕ ಸಂಘಗಳು ಹೊರಗಡೆಯಿಂದ ಮೂರ್ತಿ ಖರೀದಿಸಿ ತಂದಿದ್ದಾರೆ. ಬರಗಾಲ ಇದ್ದರೂ ಜನರು ಗಣೇಶೋತ್ಸವ ಮಾಡುವುದನ್ನು ಬಿಡುವುದಿಲ್ಲ. ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ ಅಷ್ಟೆ.

–ವೆಂಕಟೇಶ, ಗಣೇಶ ವಿಗ್ರಹಗಳ ವ್ಯಾಪಾರಿ

ಬರಗಾಲ ಇದೆ

ಏಳು ವರ್ಷಗಳಿಂದ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೇವೆ. ಬರಗಾಲ ಇರುವುದರಿಂದ ಈ ವರ್ಷ ಜನರಲ್ಲಿ ಹಣವಿಲ್ಲ. ಬಹಳಷ್ಟು ಮೂರ್ತಿಗಳು ಮಾರಾಟವಾಗಿಲ್ಲ.

–ಶಾಂತಾಬಾಯಿ, ಗಣೇಶ ವಿಗ್ರಹ ವ್ಯಾಪಾರಿ

ಹಳ್ಳಿಗರು ಬರುತ್ತಿಲ್ಲ

ಗಣೇಶನ ಅಲಂಕಾರಿಕ ಸಾಮಗ್ರಿಗಳ ಮಾರಾಟ ಬಹಳ ಕಡಿಮೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಮಾತ್ರ ವ್ಯಾಪಾರ ಇದೆ. ಮುಖ್ಯವಾಗಿ ಹಳ್ಳಿಯ ಜನರು ವ್ಯಾಪಾರಕ್ಕೆ ಬರುತ್ತಿಲ್ಲ.

–ವೆಂಕಟೇಶ, ಸಂಧ್ಯಾಬುಕ್‌ಹೌಸ್‌

ಖರೀದಿ ಶಕ್ತಿಯಿಲ್ಲ

ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಮಳೆಯಿಲ್ಲ, ಬೆಳೆಯಿಲ್ಲ. ದೇಣಿಗೆ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಗಣೇಶ ಹಬ್ಬದಲ್ಲಿ ವಿಜೃಂಭಣೆ ಕಾಣುತ್ತಿಲ್ಲ. ಜನರಲ್ಲಿ ಆಸಕ್ತಿ ಇದ್ದರೂ ಖರೀದಿಸುವ ಶಕ್ತಿಯಿಲ್ಲ.

–ಶ್ರೀನಿವಾಸ ರೆಡ್ಡಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT