ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಹಣ, ಆಹಾರ ಧಾನ್ಯಕ್ಕಾಗಿ ಹೆಚ್ಚಿದ ಸಂಚಾರ

ಜಿಲ್ಲೆಯಲ್ಲಿ ಕ್ರಮೇಣ ಸಡಿಲವಾಗುತ್ತಿದೆ ಲಾಕ್‌ಡೌನ್‌
Last Updated 8 ಏಪ್ರಿಲ್ 2020, 3:54 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕೇಂದ್ರದಲ್ಲಿ ಆಡಳಿತಾಧಿಕಾರಿಗಳಿಂದ ಪಾಸ್‌ಗಳನ್ನು ಪಡೆದು ಅಧಿಕೃತವಾಗಿ ಸಂಚರಿಸುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದರೊಂದಿಗೆ ಅಗತ್ಯ ವಸ್ತುಗಳಾದ ಆಹಾರಧಾನ್ಯ ಖರೀದಿಗಾಗಿ ಮತ್ತು ಆರೋಗ್ಯ ಸಂಬಂಧಿತ ವಿಷಯಗಳಿಗೆ ಮನೆಯಿಂದ ಹೊರಗೆ ಬರುವವರ ಸಂಖ್ಯೆಯೂ ಭಾರಿ ಹೆಚ್ಚಳವಾಗಿದ್ದು, ಲಾಕ್‌ಡೌನ್‌ ಅನಧಿಕೃತವಾಗಿ ಸಡಿಲವಾಗುತ್ತಿದೆ.

ನಗರದೊಳಗಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯಹೆದ್ದಾರಿ ಹಾಗೂ ಬಡಾವಣೆ ರಸ್ತೆಗಳಲ್ಲಿ ಖಾಸಗಿ ವಾಹನಗಳ ಅಬ್ಬರ ಮತ್ತೆ ಶುರುವಾಗಿದೆ. ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ಪ್ರತಿಯೊಬ್ಬರನ್ನು ವಿಚಾರಿಸಿಕೊಂಡು ಮುಂದೆ ಬೀಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಕಾರಣ ಇದ್ದು, ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದೆ.

ಜಿಲ್ಲೆಯಾದ್ಯಂತ ಅನಿರೀಕ್ಷಿತ ಬೆಳವಣಿಗೆಗಳು ಜನದಟ್ಟಣೆ ಕಾರಣವಾಗಿದ್ದು ಮಂಗಳವಾರ ಕಂಡುಬಂತು. ಮಾಶಾಸನ ಪಡೆಯುವವರಿಗೆ, ಜನಧನ ಖಾತೆದಾರರಿಗೆ ಹಾಗೂ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಇದರಿಂದಾಗಿ ಬ್ಯಾಂಕ್‌ ಶಾಖೆಗಳ ಎದುರು ಖಾತೆದಾರರು ನೆರೆದಿದ್ದರು. ಮುಖ್ಯವಾಗಿ ಶೂನ್ಯ ಬ್ಯಾಲೆನ್ಸ್‌ ಇರುವ ಜನಧನ ಖಾತೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಏಕಕಾಲಕ್ಕೆ ಬ್ಯಾಂಕ್‌ ಶಾಖೆಗಳತ್ತ ಧಾವಿಸಿದ್ದರು. ಬ್ಯಾಂಕ್‌ ಸಿಬ್ಬಂದಿ ಹಾಗೂ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಅನುಭವಿಸುತ್ತಿದ್ದ ದೃಶ್ಯ ಕಂಡುಬಂತು.

ಗಾಂಧಿ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗೂ, ಸ್ಟೇಷನ್‌ ರಸ್ತೆಯುದ್ದಕ್ಕೂ ಬ್ಯಾಂಕ್‌ ವ್ಯವಹಾರಕ್ಕಾಗಿ ಜನರು ಜಮಾಯಿಸಿದ್ದರು. ಇದಲ್ಲದೆ, ನಗರದಲ್ಲಿರುವ ನ್ಯಾಯ ಬೆಲೆ ಅಂಗಡಿಗಳ ಎದುರು ಕೂಡಾ ಜನದಟ್ಟಣೆ ಕಂಡುಬಂತು. ಕೆಲವು ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆಗಾಗಿ ಗುರುತುಗಳನ್ನು ಹಾಕಲಾಗಿತ್ತು. ಆದರಾಚೆ ನಿಂತಿರುವವರು ಗುಂಪು ಕಟ್ಟಿಕೊಂಡಿದ್ದರು.

ಬ್ಯಾಂಕ್‌ ಶಾಖೆಯೊಳಗೆ ನಿಂತುಕೊಳ್ಳುವುದಕ್ಕೂ ಜಾಗವಿಲ್ಲದ ಕಾರಣ, ದ್ವಾರ ಬಂದ್‌ ಮಾಡಿಕೊಂಡು ಸರದಿಯಲ್ಲಿ ಒಳಗೆ ಬಿಡುತ್ತಿರುವುದು ಕಂಡುಬಂತು. ಮಾಸಾಶನ ಹಾಗೂ ಪಿಂಚಣಿ ಪಡೆಯುವುದಕ್ಕೆ ಬಂದಿದ್ದ ವಯೋವೃದ್ಧರು ಮತ್ತು ನಿವೃತ್ತ ನೌಕರರು ಬ್ಯಾಂಕ್‌ ಎದುರಿನ ಜನರನ್ನು ನೋಡಿ ವಾಪಸ್ಸಾದರು.

ಗಂಜ್‌ ಸರ್ಕಲ್‌, ತಹಶೀಲ್ದಾರ್‌ ಕಚೇರಿ ಎದುರಿನ ಅಂಚೆ ಕಚೇರಿಗಳ ಮುಂದೆ ಮಾಸಾಶನ ಪಡೆಯುವವರ ಸರದಿ ಏರ್ಪಟ್ಟಿತ್ತು. ಬೇಸಿಗೆ ಬಿಸಿಲು ಸಹಿಸಿಕೊಂಡು ನಿಂತುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಸಿಲಿಂಡರ್‌ ಪಡೆಯುವುದಕ್ಕೆ ಹಾಗೂ ವಿಚಾರಿಸುವುದಕ್ಕಾಗಿ ಏಜೆನ್ಸಿಗಳ ಎದುರಿನಲ್ಲಿಯೂ ಜನರು ಜಮಾಯಿಸಿದ್ದರು. ನೇರವಾಗಿ ಗ್ಯಾಸ್‌ ಏಜೆನ್ಸಿಯಿಂದ ಸಿಲಿಂಡರ್‌ ಪಡೆಯುವುದಕ್ಕಾಗಿ ಗ್ರಾಮೀಣ ಭಾಗಗಳಿಂದ ಜನರು ಜನರು ಬಂದಿದ್ದರು.

ನಗರದ ಕೊಳೆಗೇರಿಗಳಲ್ಲಿ ಉಚಿತ ಆಹಾರಧಾನ್ಯ ಮತ್ತು ಉಚಿತ ಹಾಲು ಪಡೆಯುವುದಕ್ಕಾಗಿ ಜನರು ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಆಹಾರಧಾನ್ಯ ಪಡೆಯುವುದಕ್ಕೆ ಸಾಧ್ಯವಾಗದ ಬಡವರು ಅಸಹಾಯಕರಾಗಿ ಆರೋಪಿಸುತ್ತಾ ನಿಂತಿದ್ದರು. ‘ಆಹಾರಧಾನ್ಯ ಹಂಚುವುದಕ್ಕಾಗಿ ನಗರಸಭೆ ಸದಸ್ಯರಿಂದ ಅಕ್ಕಿ, ಬೇಳೆ ಪಡೆದುಕೊಂಡಿರುವವರು ಸರಿಯಾಗಿ ಎಲ್ಲರಿಗೂ ಕೊಡುತ್ತಿಲ್ಲ. ತಮಗೆ ಬೇಕಾದ ಜನರಿಗೆ ಮಾತ್ರ ಹಂಚುತ್ತಿದ್ದಾರೆ’ ಎಂದು ಎಲ್‌ಬಿಎಸ್‌ ನಗರ ವಾಸಿಗಳು ಆರೋಪಿಸುತ್ತಿರುವುದು ಕಂಡುಬಂತು.

*
ಕೋವಿಡ್‌ ರೋಗದ ಬಗ್ಗೆ ಜನರಲ್ಲಿ ಆತಂಕ ಬರಬಾರದು. ಆದರೆ ಸೋಂಕಿನ ಬಗ್ಗೆ ಜನರನ್ನು ಜಾಗೃತೆಯಿಂದ ಇರಬೇಕು. ಇದೇ ವೇಳೆ, ಅಗತ್ಯ ವಸ್ತುಗಳ ಕೊರತೆ ಆಗದಂತೆಯೂ ನೋಡಬೇಕಾಗಿದೆ. ಹಾಗಂತ ಎಲ್ಲರೂ ಮನೆಯಿಂದ ಹೊರಬರಬಾರದು.
-ಆರ್‌.ವೆಂಕಟೇಶಕುಮಾರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT