ಸೋಮವಾರ, ಸೆಪ್ಟೆಂಬರ್ 28, 2020
24 °C

ಲಿಂಗಸುಗೂರು: ಮ್ಯಾದರಗಡ್ಡಿಯಲ್ಲಿ ಸಿಲುಕಿದ ಪರಿಶಿಷ್ಟ ಕುಟುಂಬಗಳು

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆ ಭರ್ತಿಯಾಗಿದ್ದು ಈಗಾಗಲೇ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ (ಹರಲಗಡ್ಡಿ), ವಂಕಮ್ಮನಗಡ್ಡಿ ಕೆಲ ಪರಿಶಿಷ್ಟ ಕುಟುಂಬಸ್ಥರು ಸಿಲುಕಿಕೊಂಡಿದ್ದಾರೆ.

ತಾಲ್ಲೂಕಿನ ಯರಗೋಡಿ ಬಳಿಯ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಕರಕಲಗಡ್ಡಿಯಲ್ಲಿ ಒಂದು ಕುಟುಂಬದ ನಾಲ್ಕು ಜನ ಮತ್ತು ಮ್ಯಾದರಗಡ್ಡಿಯಲ್ಲಿ ಮೂರು ಕುಟುಂಬದ 14 ಜನರು, ಕುರಿ, ಮೇಕೆ, ಎಮ್ಮೆ, ಆಕಳು, ಎತ್ತು ಸೇರಿದಂತೆ ಜಾನುವಾರು ಸಂರಕ್ಷಣೆಗೆ ಹೋದವರು ಮರಳಿ ಬರಲಾಗದೆ ಅಲ್ಲಿಯೆ ಉಳಿದುಕೊಂಡಿದ್ದು ಪಡಿತರಕ್ಕಾಗಿ ಪರದಾಡುವಂತಾಗಿದೆ.

ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ತಾಲ್ಲೂಕು ಮತ್ತು ಜಿಲ್ಲಾಡಳಿತ ಮಾತುಗಳಿಂದ ರೋಸಿಹೋದ ಜನತೆ ನಡುಗಡ್ಡೆಯೆ ನಮಗೆ ವಾಸಿಸಲು ಯೋಗ್ಯವಾಗಿದೆ. ಸರ್ಕಾರದ ಪ್ರತಿನಿಧಿಗಳು ಮೇಲಿಂದ ಮೇಲೆ ಭೇಟಿ ನೀಡಿ ನಮ್ಮನ್ನು ಈಚೆಗೂ ಬಿಡದೆ, ಆಚೆಗೆ ಪರ್ಯಾಯ ವ್ಯವಸ್ಥೆ ಮಾಡದೆ ಭಿಕ್ಷುಕರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

2019ರ ಪ್ರವಾಹ ಸಂದರ್ಭದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದ್ದ ತಾಲ್ಲೂಕು ಆಡಳಿತ ಎನ್‍ಡಿಆರ್ ಎಫ್‍, ಅಗ್ನಿಶಾಮಕ, ಪೊಲೀಸ್‍ ಸಿಬ್ಬಂದಿ ಸಹಯೋಗದಲ್ಲಿ ಒತ್ತಾಯಪೂರಕ ಕರೆದುಕೊಂಡು ಹೋಗಿ ಶಾಲೆಯೊಂದರ ಗಂಜಿ ಕೇಂದ್ರದಲ್ಲಿ ಬಿಟ್ಟಿದ್ದರು. ಆಗಿನ ಸಂದರ್ಭದಲ್ಲಿ ಹಾಳಾದ ಬೆಳೆ, ಮನೆ, ಜಾನುವಾರು ನಷ್ಟದ ಪರಿಹಾರವಾಗಿ ಇಂದಿಗೂ ಬಿಡಿಕಾಸು ಬಂದಿಲ್ಲ.

ಈ ವರ್ಷವೂ ಅದೇ ಸ್ಥಿತಿ ಬಂದೊದಗಬಹುದು ಎಂದುಕೊಂಡು ಜಮೀನುಗಳ ಬಿತ್ತನೆ ಮಾಡಿಕೊಂಡಿಲ್ಲ. ಒಂದು ವರ್ಷದಿಂದ ಮನೆಗಳಲ್ಲಿ ಕಾಳು ಕಡಿ ಇಲ್ಲದೆ ಒಪ್ಪತ್ತಿನ ಊಟಕ್ಕೆ ಪರದಾಡುವ ದುಃಸ್ಥಿತಿ ಬಂದೊದಗಿದೆ. ಜಾನುವಾರು ಬಿಡಲು ಬಂದವರು ಇಲ್ಲಿಯೆ ಸಿಲುಕಿಕೊಂಡಿದ್ದು ನಮ್ಮನ್ನು ಇಂದಿಗೂ ಯಾರು ಸಂಪರ್ಕಿಸುತ್ತಿಲ್ಲ ಎಂದು ಹೊಳೆಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರವಾಹ ಸಂದರ್ಭದಲ್ಲಿ ಆಡಳಿತ ನೀಡುತ್ತ ಬಂದಿರುವ ಗಂಜಿ, ಪೊಳ್ಳು ಭರವಸೆಗೆ ಸುಂದರ ಬದುಕನ್ನೇ ಕಳೆದುಕೊಂಡಿದ್ದೇವೆ. ನೆಮ್ಮದಿಯಾಗಿದ್ದ ಕುಟುಂಬಸ್ಥರನ್ನು ಹರಿದು ಹಂಚಿ ಹೋಗುವಂತೆ ಮಾಡಿದೆ. ಪರ್ಯಾಯ ವ್ಯವಸ್ಥೆಯನ್ನು ಮಾಡದೆ, ಕಾಲು ಸೇತುವೆ ನಿರ್ಮಿಸುವ ಭರವಸೆಗಳು ಹುಸಿಯಾಗಿವೆ. ಪರಿಶಿಷ್ಟರೆಂಬ ಕಾರಣಕ್ಕೆ ಈ ಬಾರಿ ಸೌಜನ್ಯತೆಗೂ ಮಾತನಾಡಿಸಲು ಬಂದಿಲ್ಲ’ ಎಂದು ಮಲ್ಲಪ್ಪ ಮಾದರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು