ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಕೃಷಿ ಸಂಶೋಧನೆಗೆ ಯುವ ಆಸಕ್ತರು ಅಗತ್ಯ

Last Updated 28 ಜೂನ್ 2020, 14:50 IST
ಅಕ್ಷರ ಗಾತ್ರ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅವರು ‘ಪ್ರಜಾವಾಣಿ’ ಕಚೇರಿಯಲ್ಲಿ ಭಾನುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಎಸ್‌ಸಿ ಕೃಷಿ ಪದವಿ ಪ್ರವೇಶ ಬಯಸುತ್ತಿರುವ ಪಿಯುಸಿ ದ್ವಿತೀಯ ವಿಜ್ಞಾನ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ಪ್ರಶ್ನೆಗಳನ್ನು ಆಲಿಸಿದರು. ಒಂದೇ ವಿಷಯ ಕುರಿತು ಹತ್ತಾರು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರೂ ಬೇಸರ ಮಾಡಿಕೊಳ್ಳದೆ ಶಾಂತವಾಗಿ ಉತ್ತರಿಸಿದರು.

ಚಿತ್ರದುರ್ಗ, ಧಾರವಾಡ, ಹಾವೇರಿ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಕರೆಗಳನ್ನು ಮಾಡಿ, ಬಿಎಸ್‌ಸಿ ಕೃಷಿ ಪದವಿ ಪ್ರವೇಶದ ಕುರಿತು ಪ್ರಶ್ನೆಗಳನ್ನು ಕೇಳಿದರು. ಕೋವಿಡ್‌–19 ಇರುವುದರಿಂದ ಬಿಎಸ್‌ಸಿ ಕೃಷಿ ಪದವಿ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ರಾಜ್ಯ ಸರ್ಕಾರವು ತೀರ್ಮಾನ ಕೈಗಳ್ಳುತ್ತದೆ. ಸರ್ಕಾರದಿಂದ ಬರುವ ಆದೇಶದ ಬಗ್ಗೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ 36 ಕರೆಗಳನ್ನು ಸ್ವೀಕರಿಸಿದರು. ಪ್ರಶ್ನೆಗಳು ಒಂದೇ ರೀತಿಯಾಗಿಯೇ ಇದ್ದವು. ಫೋನ್‌ ಪ್ರಶ್ನೆಗಳ ವಿವರ...

* ಪಿಯುಸಿ (ವಿಜ್ಞಾನ) ಬಳಿಕ ಬಿಎಸ್‌ಸಿ ಅಗ್ರಿ ಮಾಡುವುದಕ್ಕೆ ಏನು ಮಾಡಬೇಕು?

ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಅರ್ಜಿಯಲ್ಲಿಯೇ ಕೃಷಿ ಪದವಿ ಆಯ್ಕೆ ಮಾಡಿ ಭರ್ತಿ ಮಾಡಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ರ‍್ಯಾಂಕ್‌ ಪಟ್ಟಿ ಸಿದ್ಧವಾಗುತ್ತದೆ. ವಿದ್ಯಾರ್ಥಿಗಳು ಪಿಸಿಎಂಬಿ ವಿಷಯಗಳಲ್ಲಿ ಪಡೆದ ಅಂಕಗಳನ್ನು ಶೇ 50, ಸಿಇಟಿ ಅಂಕಗಳನ್ನು ಶೇ 50 ಎಂದು ಪರಿಗಣಿಸಲಾಗುತ್ತದೆ.

* ಬಿಎಸ್‌ಸಿ ಅಗ್ರಿ ಮುಗಿಸಿದವರಿಗೆ ಉದ್ಯೋಗಾವಕಾಶಗಳು?

ಬಿಎಸ್‌ಸಿ ಅಗ್ರಿ ಹಾಗೂ ಬಿಎಸ್‌ಸಿ ಅಗ್ರಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕ ಹುದ್ದೆ, ಸಹಾಯಕ ಅಧಿಕಾರಿ ಹಾಗೂ ಇನ್ನಿತರೆ ಹುದ್ದೆಗಳಿಗೆ ಸೇರಿಕೊಳ್ಳಬಹುದು. ಆಸಕ್ತಿ ಇದ್ದವರು ಪದವಿ ಆಧರಿಸಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌, ಐಪಿಎಸ್‌, ಕೆಎಎಸ್‌ಗಳನ್ನು ಪಾಸಾಗಬಹುದು. ಕೃಷಿ ಕ್ಷೇತ್ರದ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ.

* ಪ್ರಾಯೋಗಿಕ ಪರೀಕ್ಷೆ ರದ್ದು ಮಾಡುವ ಪ್ರಸ್ತಾಪ ಇದೆಯೇ?

ಸದ್ಯಕ್ಕೆ ಕೋವಿಡ್‌ ಇರುವುದರಿಂದ ಬಿಎಸ್‌ಸಿ ಅಗ್ರಿ ಪದವಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವುದು ಚರ್ಚಾ ಹಂತದಲ್ಲಿದೆ. ಸರ್ಕಾರ ಏನು ಮಾರ್ಗದರ್ಶನ ಮಾಡುತ್ತದೆ ಅದು ಅಂತಿಮ. ಸರ್ಕಾರವು ನೀಡುವ ಸೂಚನೆ ಆಧರಿಸಿ ಮಾಧ್ಯಮಗಳ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಲಾಗುವುದು.

* ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಪ್ರಮಾಣಪತ್ರ ಎಲ್ಲಿ ಪಡೆಯಬೇಕು?

ಕೃಷಿ ಪ್ರಮಾಣಪತ್ರ ಮತ್ತು ಕೃಷಿ ಕೂಲಿಕಾರ್ಮಿಕರಿಗೆ ಪ್ರಮಾಣಪತ್ರವನ್ನು ಆಯಾ ತಾಲ್ಲೂಕು ತಹಶೀಲ್ದಾರ್‌ರಿಂದ ಪಡೆಯಬೇಕು. ಮುಖ್ಯವಾಗಿ ಆದಾಯ ಪ್ರಮಾಣಪತ್ರ ಸಲ್ಲಿಸುವವರು ನಿಖರವಾದ ಆದಾಯ ಉಲ್ಲೇಖಿಸಬೇಕು. ಯಾವುದಾದರೂ ನೌಕರಿ ಮಾಡುವವರು ಒಟ್ಟು ವೇತನ ₹4 ಲಕ್ಷ ಇದ್ದರೆ, ಕೃಷಿಯಿಂದ ಎಷ್ಟು ಆದಾಯ ಎಂಬುದನ್ನು ತೋರಿಸಬೇಕು. ಇಲ್ಲದಿದ್ದರೆ ಸೀಟು ಮೀಸಲಾತಿ ಪಡೆಯಲು ಅರ್ಹರಾಗುವುದಿಲ್ಲ.

* ಡಿಪ್ಲೊಮಾ ಕೃಷಿ ಕೋರ್ಸ್‌ ಹೇಗೆ ಪಡೆಯುವುದು ?

ಎಸ್ಸೆಸ್ಸೆಲ್ಸಿ ಅರ್ಹತೆ ಆಧಾರದಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ನೀಡಲಾಗುತ್ತದೆ. ಕಲಬುರ್ಗಿ, ಭೀಮರಾಯನಗುಡಿ, ಹಗರಿ ಹಾಗೂ ಬೀದರ್‌ನಲ್ಲಿರುವ ಕೃಷಿ ಕಾಲೇಜುಗಳಲ್ಲಿ ಡಿಪ್ಲೊಮಾ ಕೋರ್ಸ್‌ ಮಾಡಬಹುದು. ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಲ್ಯಾಟರಲ್‌ ಎಂಟ್ರಿ ಮೂಲಕ ಬಿಎಸ್‌ಸಿ ಕೃಷಿ ಪದವಿಗೆ ಪ್ರವೇಶ ಪಡೆಯುವುದಕ್ಕೆ ಶೇ 5 ರಷ್ಟು ಸೀಟುಗಳು ಮೀಸಲಾತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT