ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಜಾರಿ; ಹೋರಾಟ ತಾತ್ಕಾಲಿಕ ಸ್ಥಗಿತ

51 ದಿನಗಳ ಚಿಕ್ಕೋಡಿ ಜಿಲ್ಲಾ ರಚನೆ ಹೋರಾಟ ಅಂತ್ಯ
Last Updated 27 ಮಾರ್ಚ್ 2018, 19:31 IST
ಅಕ್ಷರ ಗಾತ್ರ

ಚಿಕ್ಕೋಡಿ: ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದರಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಕಳೆದ 51 ದಿನಗಳಿಂದ ಹೋರಾಟ ನಡೆಸಿದ್ದ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದರು.

ಬೀದಿಗಿಳಿದ ಮಠಾಧೀಶರು: ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಫೆ.8ರಿಂದ 5 ದಿನಗಳವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದರು. ವಿವಿಧ ಸ್ವಾಮೀಜಿಗಳ ಮನವಿ ಮೇರೆಗೆ ಹೋರಾಟ ಮೊಟಕುಗೊಳಿಸಿದ್ದರು. ಅನೇಕ ಹೋರಾಟಗಾರರು ಸರದಿ ಉಪವಾಸ ಸತ್ಯಾಗ್ರಹದಲ್ಲೂ ಪಾಲ್ಗೊಂಡರು.

ಶ್ರೀಶೈಲ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸೇರಿ 20ಕ್ಕೂ ಹೆಚ್ಚು ಮಠಾಧೀಶರು  ಹೋರಾಟದಲ್ಲಿ ಪಾಲ್ಗೊಂಡಿದ್ದರು.

ನಿಷ್ಪಲವಾದ ನಿಯೋಗಗಳು: ಮಠಾಧೀಶರು ಸೇರಿ ಈ ಭಾಗದ ಜನಪ್ರತಿನಿಧಿಗಳು ಮೂರು ಬಾರಿ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಜೊತೆ ನಡೆಸಿದ ಮಾತುಕತೆಯೂ ಫಲಪ್ರದವಾಗಲಿಲ್ಲ. ಚಿಕ್ಕೋಡಿ ಜಿಲ್ಲೆ ರಚನೆಯಾಗುತ್ತದೆ ಎಂಬ ವಿಶ್ವಾಸದೊಂದಿಗೆ ಸತ್ಯಾಗ್ರಹ ಮುಂದುವರಿಸಿದ ಹೋರಾಟಗಾರರಿಗೆ ಚುನಾವಣೆ ದಿನಾಂಕ ಪ್ರಕಟಣೆ ಸುದ್ದಿ ನಿರಾಸೆ ಮೂಡಿಸಿತು. ನೀತಿ ಸಂಹಿತೆ ಜಾರಿಯಿಂದಾಗಿ ಜಿಲ್ಲಾ ಘೋಷಣೆ ಸಾಧ್ಯವಾಗದ ಮಾತಾಗಿರುವ ಕಾರಣ ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಲು ತೀರ್ಮಾನಿಸಲಾಯಿತು.

‘ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟವನ್ನು ತಾತ್ಕಾಲಿಕ ಹಿಂಪಡೆಯಲಾಗಿದ್ದು, ಚುನಾವಣೆ ಮುಗಿದ ನಂತರ ಮತ್ತೆ ಉಗ್ರ ಹೋರಾಟ ಆರಂಭಿಸಲಾಗುವುದು’ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ತಿಳಿಸಿದರು.

‘ಪ್ರಸಕ್ತ ಚುನಾವಣೆಯಲ್ಲಿ ನಾವು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಒಂದೆರಡು ದಿನಗಳಲ್ಲಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು. ಚಿಕ್ಕೋಡಿ ಜಿಲ್ಲೆ ಮಾಡಲು ಅಡ್ಡಗಾಲು ಹಾಕಿದವರಿಗೆ ತಕ್ಕ ಪಾಠ ಕಲಿಸದೇ ನಾವು ಬಿಡುವುದಿಲ್ಲ’ ಎಂದು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಿಪಿಐ ಬಸವರಾಜ ಮೂಕರ್ತಿಹಾಳ ಮತ್ತು ತಹಶೀಲ್ದಾರ್‌ ಸಿ.ಎಸ್.ಕುಲಕರ್ಣಿ ಹೋರಾಟಗಾರರ ಮನವೊಲಿಸಿ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT