ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದೆಲ್ಲೆಡೆ ಸಸಿ ನೆಡುವ ಕಾರ್ಯಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿಕೆ
Last Updated 11 ಜೂನ್ 2019, 13:40 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರವು ಈ ವರ್ಷವನ್ನು ಜಲ ವರ್ಷವೆಂದು ಆಚರಣೆ ಮಾಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೇ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರ ಅಸಮತೋಲನದಿಂದ ಭೀಕರ ಬರಗಾಲ ಎದುರಿಸುತ್ತಿದ್ದು ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ. ರಾಜ್ಯದ ಕೆಲವು ಕಡೆ ಸಾವಿರದಿಂದ 1,500 ಅಡಿಯವರೆಗೆ ಕೊಳವೆಬಾವಿ ಕೊರೆದರೂ ನೀರು ಬೀಳುತ್ತಿಲ್ಲ ಎಂದರು.

ರಾಯಚೂರು ಜಿಲ್ಲೆಯು ನೀರಾವರಿ ಪ್ರದೇಶ ಆಗಿರುವುದರಿಂದ ನೀರಿನ ಸದ್ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಮನೆಗೊಂದು ಮಗು ಮಗುವಿಗೊಂದು ಮರ, ಊರಿಗೊಂದು ವನ ಎನ್ನುವಂತೆ ಕೇವಲ ಅರಣ್ಯ ಇಲಾಖೆ ಮತ್ತು ಅಧಿಕಾರಿಗಳು ಈ ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಸಮಾಜದ ಪ್ರತಿಯೊಬ್ಬರು ಗಿಡನೆಡುವ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸಸಿಗಳನ್ನು ನೆಟ್ಟು ಗಿಡದ ನಿರ್ವಹಣೆಗೆ ಒಂದೊಂದು ವಿದ್ಯಾರ್ಥಿಗಳಿಗೆ ಜವಾಬ್ದಾರಿ ವಹಿಸಬೇಕು. ಉತ್ತಮ ಗಿಡಗಳನ್ನು ಬೆಳೆಸಿದ ಮಕ್ಕಳಿಗೆ ಡಿಡಿಪಿಐ ಮತ್ತು ಬಿಇಓಗಳಿಂದ ಸನ್ಮಾನಿಸಬೇಕು. ಈಗ ಮಳೆಗಾಲ ಪ್ರಾರಂಭ ಆಗುತ್ತಿರುವುದರಿಂದ ಗಿಡ ನೆಡುವ ಕಾರ್ಯಕ್ರಮ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷೀ ಮಾತನಾಡಿ, ‘ಪ್ರತಿ ವರ್ಷವು ಸ್ವಚ್ಛ ಮೇವ ಜಯತೇ ಕಾರ್ಯಕ್ರಮ ಮಾಡುತ್ತೇವೆ. ಇದರ ಯಶಸ್ವಿಗೆ ಕೇವಲ ಅಧಿಕಾರಿಗಳು ಸಸಿ ನೆಟ್ಟರೆ ಸಾಲದು ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕು. ಸ್ವಚ್ಛ ಮೇವ ಜಯತೇ ಅಂದೋಲನ ಜೂನ್ 11 ರಿಂದ ಜುಲೈ 10ರವರೆಗೆ ಆಚರಿಸುತ್ತಿದೆ. ಒಣ ಕಸ, ಹಸಿ ಕಸ ಎಂದು ವಿಂಗಡನೆ ಮಾಡಿ ಸ್ವಚ್ಛ, ಸುಂದರ ಗ್ರಾಮೀಣ ಪರಿಸರ ನಿರ್ವಹಣೆಗೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸ್ವಚ್ಛ ಮೇವ ಜಯತೇ ಜಾಗೃತಿ ಕುರಿತು ಕರಪತ್ರಗಳನ್ನು ಬಿಡುಗಡೆಗೊಳಿಸಿ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಎಲ್ಲರೂ ಸ್ವೀಕರಿಸಿದರು.

ಸ್ವಚ್ಛ ಮೇವ ಜಯತೇ ಅಂದೋಲನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಜಿಲ್ಲಾ ಪಂಚಾಯತ್ ಸಭಾಂಗಣದ ಆವರಣದಲ್ಲಿ ಸ್ವಚ್ಛತಾ ರಥಕ್ಕೆ ಚಾಲನೆ ನೀಡಲಾಯಿತು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಂ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ರಾಯಚೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಮ್ಮ ಕೆ., ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಲಿನ್ ಅತುಲ್, ಉಪವಿಭಾಗಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT