ಮಂಗಳವಾರ, ಅಕ್ಟೋಬರ್ 15, 2019
24 °C

ಪ್ಲಾಸ್ಟಿಕ್‌ ಮುಕ್ತವಾಗಲು ಜಿಲ್ಲೆಗೆ ಗಡುವು: ಜಿಲ್ಲಾಧಿಕಾರಿ

Published:
Updated:
Prajavani

ರಾಯಚೂರು: ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಅಭಿಯಾನಕ್ಕೆ ಆದ್ಯತೆ ವಹಿಸಲೇಬೇಕಾಗಿದೆ. ಈ ಬಗ್ಗೆ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ, ಗಡುವು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಹಾವಳಿ ತಪ್ಪಿಸಲು ಈಗಾಗಲೇ ಸ್ಥಳೀಯ ನಗರ ಸಂಸ್ಥೆಗಳು ದಂಡ ವಸೂಲಿ ಮಾಡುತ್ತಿವೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಇನ್ನು ಮುಂದೆ, ಗ್ರಾಮಗಳಿಂದ ಹಿಡಿದು ನಗರಮಟ್ಟದವರೆಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕಗೊಳಿಸಬೇಕಾಗಿದೆ. ತ್ಯಾಜ್ಯ ಸಂಗ್ರಹಿಸುವ ಹಂತದಲ್ಲೇ ಹಸಿಕಸ, ಒಣಕಸವೆಂದು ಪ್ರತ್ಯೇಕಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ₹18.5 ಕೋಟಿ ಬೆಳೆ ನಷ್ಟ ಆಗಿರುವುದು ಸೇರಿದಂತೆ ಒಟ್ಟು ₹31 ಕೋಟಿ ಹಾನಿಯಾಗಿದೆ. ಸಮಗ್ರ ವರದಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜೆಸ್ಕಾಂ ಸೇರಿದಂತೆ ಕೆಲವು ಇಲಾಖೆಗಳಿಗೆ ನೇರವಾಗಿ ಅನುದಾನ ಬಿಡುಗಡೆ ಆಗಲಿದೆ ಎಂದು ಹೇಳಿದರು.

ಪ್ರವಾಹದಿಂದ ಸರ್ಕಾರಿ ಶಾಲೆ, ರಸ್ತೆ, ಮನೆ, ಸೇತುವೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ಹಾನಿಯಾಗಿವೆ. ಈ ಬಗ್ಗೆ ಮೂರು ಭಾಗಗಳಲ್ಲಿ ವಿಂಗಡಿಸಿ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಸೂಚನೆ ನೀಡಿದ್ದರು. ಅದರಂತೆ, ಬೆಳೆ ಹಾನಿಯ ಕುರಿತು ಈ ಹಿಂದೆ ನಡೆಸಿದ ಸಮೀಕ್ಷೆಯ ತಂಡದಿಂದಲೇ ಸಮೀಕ್ಷೆ ಮಾಡುವುದಕ್ಕಾಗಿ ಶೀಘ್ರದಲ್ಲಿ ಸಭೆ ಕರೆದು ಚರ್ಚಿಸಿ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದರು.

ಬೆಳೆ ಹಾನಿ, ಮನೆ ಸಮೀಕ್ಷೆ ಆನಂತರ ಜಿಲ್ಲೆಯಾದ್ಯಂತ ಮಾಸಾಶನ ಕುರಿತ ಪರಿಶೀಲನೆ ಆರಂಭಿಸಲಾಗುವುದು. ಮುಖ್ಯವಾಗಿ ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದಂತೆ ಮನೆಗಳಿಗೆ ಹೋಗಿ ಅರ್ಜಿಗಳನ್ನು ಪಡೆಯುವ ಕಾರ್ಯ ನಡೆಸಲಾಗುವುದು. ಈ ಬಗ್ಗೆ ಕಂದಾಯ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದರು.

Post Comments (+)