ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ: ಅನುದಾನ ಇದ್ದರೂ ಬಳಸಿಲ್ಲ!

Last Updated 21 ಜೂನ್ 2022, 4:50 IST
ಅಕ್ಷರ ಗಾತ್ರ

ರಾಯಚೂರು: ಕುಡಿಯುವ ನೀರು ಪೂರೈಸಲು ಸರ್ಕಾರ ಅನುದಾನ ಕೊಟ್ಟರೂ ರಾಯಚೂರು ನಗರಸಭೆ ಬಳಕೆ ಮಾಡಿಲ್ಲ!

ಒಟ್ಟು ₹23.51 ಕೋಟಿ ಅನುದಾನ ಬಳಕೆಗೆ ಸಮರ್ಪಕ ಕ್ರಿಯಾ ಯೋಜನೆ ಸಿದ್ಧಪಡಿಸಲು ನಗರಸಭೆ ವಿಫಲವಾಗಿದೆ ಎಂಬುದು ರಾಯಚೂರು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ನಡೆಸಿದ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಕಲುಷಿತ ನೀರು ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅವರು ಇದನ್ನು ಉಲ್ಲೇಖಿಸಿದ್ದಾರೆ.

2020–21ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ ₹3.96 ಕೋಟಿ, 2021–22ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ₹7.79 ಕೋಟಿ, 2022–23ನೇ ಸಾಲಿನ ಹಣಕಾಸು ಯೋಜನೆಯಲ್ಲಿ ₹11.72 ಕೋಟಿ ಹಾಗೂ ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ ₹5 ಲಕ್ಷ ಬಂದಿದೆ. ಈ ಅನುದಾನ ಬಳಸಲು ನಗರಸಭೆಯು ಈವರೆಗೆ ಕ್ರಿಯಾಯೋಜನೆ ಸಿದ್ಧಪಡಿಸಿಲ್ಲ.

ಕಲುಷಿತ ನೀರು ಪೂರೈಕೆಗೆ ಆಡಳಿತಾತ್ಮಕ ವೈಫಲ್ಯವೂ ಕಾರಣ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ಮತ್ತು ರಾಯಚೂರು ಡಿವೈಎಸ್‌ಪಿ ವೆಂಕಟೇಶ ಅವರು ಪ್ರತ್ಯೇಕವಾಗಿ ತನಿಖೆ ನಡೆಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುವುದು ಬಾಕಿ ಇದೆ.

ರಾಂಪುರ ಜಲ ಶುದ್ಧೀಕರಣ ಘಟಕ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಘಟಕದ ನಿರ್ವಹಣೆಗೆ ಅಗತ್ಯವಿರುವ ರಾಸಾಯನಿಕಗಳು, ಅವುಗಳಿಗೆ ತಗುಲುವ ವೆಚ್ಚ ಸೇರಿದಂತೆ ವಿವಿಧ ಮಾಹಿತಿ ಅವರು ಕಲೆಹಾಕಿದ್ದಾರೆ.

ಶುದ್ಧ ನೀರು ಪೂರೈಸಲು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಈಗ ಆದ್ಯತೆ ನೀಡಿದ್ದಾರೆ. ಕಲುಷಿತ ನೀರು ಕುಡಿದು ಈವರೆಗೆ 7 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಇನ್ನೂ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ.

*ಕಲುಷಿತ ನೀರು ಪೂರೈಕೆಯಾದ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ತನಿಖೆ ಪೂರ್ಣಗೊಳಿಸಿದ್ದು, ಎರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಅಂಶಗಳನ್ನು ಸದ್ಯ ಬಹಿರಂಗ ಮಾಡಲಾಗದು.
- ವೆಂಕಟೇಶ, ಡಿವೈಎಸ್‌ಪಿ ರಾಯಚೂರು

*ರಾಯಚೂರು ನಗರಸಭೆ ಸುಧಾರಣೆಗೆ ಯಾವುದೆಲ್ಲ ಕ್ರಮಗಳು ತೆಗೆದುಕೊಳ್ಳಬೇಕಿದೆ ಎಂಬುದರ ಬಗ್ಗೆ ಸಮಗ್ರ ವರದಿಯೊಂದನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸುತ್ತೇನೆ.
- ಎಲ್‌.ಚಂದ್ರಶೇಖರ್‌ ನಾಯಕ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT