ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಾವಿನಕೆರೆ ಅಭಿವೃದ್ಧಿಗೆ ಪೂರ್ವಸಿದ್ಧತೆ

ಅತಿಕ್ರಮಣ ತಡೆಗಟ್ಟಲು ಗಡಿಯಲ್ಲಿ ಸಸಿಗಳನ್ನು ನೆಡಲು ಯೋಜನೆ
Last Updated 9 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಅತಿಕ್ರಮಣಕಾರರ ಪಾಲಾಗುತ್ತಿರುವ ನಗರದ ಮಾವಿನಕೆರೆ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಡಳಿತವು ಆಸಕ್ತಿ ವಹಿಸಿ ಕಾರ್ಯೋನ್ಮುಖವಾಗಿದೆ.

ಇದಕ್ಕಾಗಿ, ಕೆರೆಯಲ್ಲಿ ಸಂಗ್ರಹವಾದ ಕಲ್ಮಶ, ಕೊಳಚೆ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಕೆರೆ ಹೂಳೆತ್ತಿ ಮತ್ತಷ್ಟು ಆಳ ಮಾಡುವುದು ಪ್ರಾಥಮಿಕ ಯೋಜನೆ. ಭಾರತೀಯ ಜೈನ್‌ ಸಮಿತಿ (ಬಿಜೆಎಸ್‌)ಯು ಗ್ರಾಮಗಳಲ್ಲಿ ಈಗಾಗಲೇ ಕೆರೆ ಹೂಳೆತ್ತುವ ಕಾರ್ಯಕ್ರಮ ಆರಂಭಿಸಿದ್ದು, ಹೆಚ್ಚುವರಿಯಾಗಿ ಮಾವಿನಕೆರೆಯನ್ನು ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಕೇಳಿಕೊಂಡಿದೆ.

‘ಬಿಜೆಎಸ್‌ನಿಂದ ಸಾಧ್ಯವಾದಷ್ಟು ಹೂಳೆತ್ತುವ ಕಾರ್ಯ ನಡೆಸಲಾಗುವುದು. ಬಾಕಿ ಕಾಮಗಾರಿ ಕೈಗೊಳ್ಳುವುದಕ್ಕೆ ಕ್ರಿಯೋಯೋಜನೆ ಸಿದ್ಧಪಡಿಸಲು ನಗರಸಭೆಗೆ ಸೂಚಿಸಲಾಗಿದೆ. ಕೆರೆ ಅಂಗಳದಲ್ಲಿ ವಾಕಿಂಗ್‌ ಪಾತ್‌ ನಿರ್ಮಾಣ ಮಾಡಿದರೆ, ಅಲ್ಲಿ ದುರ್ನಾತ ಹರಡುತ್ತಿದೆ ಎನ್ನುವ ಆರೋಪವಿದೆ. ಹೀಗಾಗಿ ಚರಂಡಿಗಳಿಂದ ಹರಿದು ಬರುವ ಕೊಳಚೆ ಕರೆಗೆ ಬರದಂತೆ ಮಾಡಲಾಗುವುದು. ಕೆರೆ ಸಮೀಕ್ಷೆ ಈ ಹಿಂದೆ ಕೈಗೊಳ್ಳಲಾಗಿತ್ತು. ಕೆರೆಯು ಒತ್ತುವರಿ ಆಗಿಲ್ಲ ಎಂದು ವರದಿ ನೀಡಲಾಗಿದೆ. ಆದರೂ ಮತ್ತೆ ಸಮೀಕ್ಷೆಗೆ ಸೂಚಿಸಲಾಗಿದೆ. ಕೆರೆ ಗಡಿಯನ್ನು ಭದ್ರಪಡಿಸಲು ನೈಸರ್ಗಿಕವಾಗಿ ಸಾಧ್ಯವಾಗುವ ಮರಗಳನ್ನು ಬೆಳೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ನಗರದ ಅಂತರ್ಜಲಕ್ಕೆ ಏಕೈಕ ಮೂಲವಾಗಿರುವ ಮಾವಿನಕೆರೆ ಸಂರಕ್ಷಣೆಗಾಗಿ ಪರಿಸರಪರ ಸಂಘ–ಸಂಸ್ಥೆಗಳು ಈಗಾಗಲೇ ಅಲ್ಲಲ್ಲಿ ಸಸಿಗಳನ್ನು ಬೆಳೆಸುತ್ತಿವೆ. ಆದರೂ ಅತಿಕ್ರಮಣ ಅವ್ಯಾಹತವಾಗಿ ಮುಂದುವರಿದಿದೆ. ಕಟ್ಟಡದ ಅವಶೇಷಗಳನ್ನು ಕೆರೆ ಸುತ್ತಲೂ ರಾಜಾರೋಷವಾಗಿ ತಂದು ಹಾಕಲಾಗುತ್ತಿದೆ. ಸಸಿಗಳ ಮೇಲೂ ಅವಶೇಷ ಹಾಕಲಾಗಿದೆ. ಅತಿಕ್ರಮಣ ತಡೆಗಟ್ಟಿ, ಕಟ್ಟಡ ಅವಶೇಷ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆಗಳು ಮನವಿ ಸಲ್ಲಿಸುತ್ತಾ ಬಂದಿವೆ. ಆದರೂ ಕ್ರಮವಾಗಿಲ್ಲ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಕೆರೆ ಅಭಿವೃದ್ಧಿಗೆ ಈ ಹಿಂದೆ ಅನುದಾನ ಒದಗಿಸಲಾಗಿತ್ತು. ಆದರೂ ಸಮಗ್ರವಾಗಿ ಕೆರೆ ಸಂರಕ್ಷಣೆ ಕಾಮಗಾರಿಗಳು ನಡೆದಿಲ್ಲ. ಭಾಗಶಃ ಕೆರೆ ಭಾಗದಲ್ಲಿ ಮಾತ್ರ ‘ವಾಕಿಂಗ್‌ ಪಾಥ್‌’ ಮಾಡಲಾಗಿದೆ. ಕೆರೆ ವಿಸ್ತಾರ ಎಷ್ಟಿದೆ ಎಂಬುದಕ್ಕೆ ಗಡಿಯನ್ನು ಹಾಕಿಲ್ಲ. ಪರಿಸರಪರ ಸಂಘಟನೆಗಳು ಹೇಳುವಂತೆ ಮಾವಿನಕೆರೆ ವಿಸ್ತೀರ್ಣ 137 ಎಕರೆಯಷ್ಟಿದೆ.

ಈ ಹಿಂದೆ ಕೆರೆ ಸಮೀಕ್ಷೆ ನಂತರದಲ್ಲೂ ಕೆರೆಗೆ ಕಟ್ಟಡದ ಅವಶೇಷಗಳನ್ನು ತಂದುಹಾಕಿ ಅನಧಿಕೃತವಾಗಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆಗಳಿಗೆ ಹೊಂದಿಕೊಂಡು ವಾಹನಗಳ ನಿಲುಗಡೆ ಶೆಡ್‌ಗಳನ್ನು ಮಾಡಿಕೊಂಡು, ಆನಂತರ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳಿಗೆ ಪಕ್ಕದಲ್ಲಿ ಕಟ್ಟಡ ಅವಶೇಷಗಳನ್ನು ತಂದುಹಾಕಿ ಮತ್ತೊಂದು ರಸ್ತೆ ಮಾಡಲಾಗಿದೆ. ಹೀಗೆ ಕೆರೆ ಅಂಗಳವನ್ನು ವ್ಯವಸ್ಥಿತವಾಗಿ ನಿತ್ಯ ಕಿರಿದಾಗಿಸಲಾಗುತ್ತಿದೆ. ಕೆರೆಗೆ ಚರಂಡಿ ಕಲ್ಮಶ ಸೇರ್ಪಡೆ ಆಗುವುದರಿಂದ ಪ್ರತಿ ಬೇಸಿಗೆಯಲ್ಲೂ ಮೀನುಗಳು ವಾಸನೆ ಹರಡಿಕೊಳ್ಳುತ್ತದೆ. ಕೆರೆ ದುರ್ವಾಸನೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT