ಜಂಟಿ ಬೆಳೆಹಾನಿ ಸಮೀಕ್ಷೆಗೆ ಸಿದ್ಧತೆ

7
ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಮಳೆ ಕೊರತೆಯಿಂದ ಬರಗಾಲ

ಜಂಟಿ ಬೆಳೆಹಾನಿ ಸಮೀಕ್ಷೆಗೆ ಸಿದ್ಧತೆ

Published:
Updated:
Prajavani

ರಾಯಚೂರು: ಜಿಲ್ಲೆಯಲ್ಲಿ ಹಿಂಗಾರಿನಲ್ಲೂ ಮಳೆಯಾಗದೆ ವ್ಯಾಪಕ ಬೆಳೆಹಾನಿ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೆ ಜಂಟಿ ಸಮೀಕ್ಷೆ ಕೈಗೊಳ್ಳಲು ಸಿದ್ಧತೆ ಮಾಡಲಾಗುತ್ತಿದೆ.

ಈ ಸಲ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿವೆ. ಜಿಲ್ಲಾಡಳಿತವು ವರದಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಲಿದೆ. ಮುಂಗಾರು ಹಂಗಾಮಿನಲ್ಲಿಯೂ ಬೆಳೆಹಾನಿ ಉಂಟಾಗಿತ್ತು. 

ಮೊದಲ ಹಂತವಾಗಿ ಕೃಷಿ ಇಲಾಖೆಯು ಈಗಾಗಲೇ ಹಿಂಗಾರು ಬೆಳೆಹಾನಿಯನ್ನು ಅಂದಾಜಿಸಿದೆ. ಎರಡನೇ ಹಂತದಲ್ಲಿ ಮೊಬೈಲ್‌ ಆ್ಯಪ್‌ ನೆರವಿನಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ. ಕೃಷಿ ಇಲಾಖೆಯು ನಡೆಸಿದ್ದ ಸಮೀಕ್ಷೆ ಪ್ರಕಾರ, ಹಿಂಗಾರು ಹಂಗಾಮಿನಲ್ಲಿ ಶೇ 74 ರಷ್ಟು ಬೆಳೆಹಾನಿ ಉಂಟಾಗಿದೆ. ಹಿಂಗಾರು ಹಂಗಾಮಿನಲ್ಲಿ 4.01 ಲಕ್ಷ ಹೆಕ್ಟೇರ್‌ ಬಿತ್ತನೆಯಾಗುವ ಗುರಿ ಇತ್ತು. ಆದರೆ, ಶೇ 80 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು.

ಹಿಂಗಾರಿನಲ್ಲಿ ಪ್ರಮುಖವಾಗಿ ಏಕದಳ ಧಾನ್ಯಗಳಾದ ಜೋಳ, ಮುಸುಕಿನ ಜೋಳ ಹಾಗೂ ಗೋಧಿಯನ್ನು ಅತಿಹೆಚ್ಚು ಶೇ 38 ರಷ್ಟು ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದರು. ಇನ್ನುಳಿದ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳಿಗೆ ಹೋಲಿಕೆ ಮಾಡಿದರೆ, ಏಕದಳ ಧಾನ್ಯಗಳ ಬೆಳೆಯು ಅತಿಹೆಚ್ಚು ಶೇ 79 ರಷ್ಟು ಹಾನಿಯಾಗಿದೆ. ದ್ವಿದಳ ಧಾನ್ಯಗಳಾದ ಕಡಲೆ ಮತ್ತು ಹುರುಳಿ ಬೆಳೆಯು ಶೇ 78 ರಷ್ಟು ಮತ್ತು ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಕುಸುಬೆ, ಅಗಸೆ, ಶೇಂಗಾ ಬೆಳೆಗಳು ಶೇ 6 ರಷ್ಟು ಹಾನಿಯಾಗಿವೆ.

‘ಜಿಲ್ಲೆಯಲ್ಲಿ ಬಿತ್ತನೆ ಮಾಡಿದ್ದ ಪ್ರದೇಶದಲ್ಲಿ ಹಸಿರು ಕಾಣುತ್ತಿದ್ದರೂ ಫಸಲು ಬರುವಷ್ಟು ತೇವಾಂಶ ಕಂಡು ಬಂದಿಲ್ಲ. ಜೋಳ, ಮುಸುಕಿನ ಜೋಳ ಹಾಗೂ ಕಡಲೆ ಬೆಳೆಗಳು ಕಾಯಿ ಕಟ್ಟಿಕೊಂಡಿರುವುದು ಕಂಡು ಬರುತ್ತದೆಯಾದರೂ ಅದರಲ್ಲಿ ಕಾಳುಗಳು ಬೆಳೆದಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿಕೊಂಡು ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಇದೀಗ ಅ್ಯಪ್‌ ಮೂಲಕ ಪ್ರತಿ ತಾಲ್ಲೂಕಿನಲ್ಲಿ ಶೇ 10 ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಬೆಳೆಹಾನಿಯನ್ನು ದಾಖಲಿಸಲಾಗುವುದು. ಎರಡು ಸಮೀಕ್ಷಾ ವರದಿಯನ್ನು ಹೋಲಿಕೆ ಮಾಡಿಕೊಂಡು, ಅಂತಿಮ ವರದಿ ಸಿದ್ಧಪಡಿಸಿ ಕಳುಹಿಸಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಚೇತನಾ ಪಾಟೀಲ ಹೇಳಿದರು.

‘ಕೃಷಿ ಇಲಾಖೆಯಿಂದ ಇನ್ನೂ ಅಂತಿಮ ವರದಿ ಸಲ್ಲಿಕೆಯಾಗಿಲ್ಲ. ಪ್ರಾಥಮಿಕವಾಗಿ ಮೇಲ್ನೋಟ ಆಧರಿಸಿ ಅವರು ಸಮೀಕ್ಷೆ ಮಾಡಿರಬಹುದು. ಆದರೆ, ಜಂಟಿ ಸಮೀಕ್ಷೆ ನಡೆಸುವುದಕ್ಕೆ ಕೂಡಲೇ ಸೂಚನೆ ನೀಡಲಾಗುವುದು. ಆನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ. ಶರತ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !