ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಜರುಗಿಸಿ

7
ಜಿಲ್ಲಾ ಅಂತರ್ ಇಲಾಖೆ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ

ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಜರುಗಿಸಿ

Published:
Updated:
Deccan Herald

ರಾಯಚೂರು: ಅತಿಯಾದ ಸೊಳ್ಳೆಗಳಿಂದ ಡೆಂಗಿ, ಮಲೇರಿಯಾ ಹಾಗೂ ಮೆದುಳು ಜ್ವರದಂತಹ ಕಾಯಿಲೆಗಳು ಬರದಂತೆ ತಡೆಯಲು ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ ನೀಡಿದರು.

ಡೆಂಗಿ ವಿರೋಧಿ ಮಾಸಾಚರಣೆ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಅಂತರ್ ಇಲಾಖೆ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆನೆಹೊಸೂರು ಹಾಗೂ ಇತರೆ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಸೂಚಿಸಿದರೂ, ಪರಿಸ್ಥಿತಿ ಸುಧಾರಣೆಯಾಗಿಲ್ಲ. ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಡೆಂಗಿ ಜ್ವರದ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಭಿತ್ತಿಪತ್ರ ಅಂಟಿಸಬೇಕು ಎಂದರು.

ಡೆಂಗಿಯಿಂದ ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಕೈ ನೋವಿನಿಂದ ವಿಪರೀತವಾದ ಸುಸ್ತು ಬರಲಿದೆ. ಚರ್ಮದ ಮೇಲೆ ಗುಳ್ಳೆಗಳು, ವಸಡು ಹಾಗೂ ಮೂಗಿನಿಂದ ರಕ್ತ ಸೋರುವಿಕೆ ಉಂಟಾಗುತ್ತದೆ ಎಂದು ತಿಳಿಸಿದರು.

ಡೆಂಗಿ ಜ್ವರ ನಿಯಂತ್ರಣ ಮಾಡಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮಾಡಿ, ಮನೆಯಲ್ಲಿನ ನೀರು ಸಂಗ್ರಹಣಾ ಸಾಮಗ್ರಿಗಳನ್ನು ಮುಚ್ಚಳದಿಂದ ಮುಚ್ಚಬೇಕು. ವಾರಕ್ಕೊಮ್ಮೆಯಾದರೂ ನೀರು ಸಂಗ್ರಹಿಸುವ ಬ್ಯಾರೆಲ್‌ಗಳನ್ನು ಸ್ವಚ್ಚವಾಗಿ ತೊಳೆಯಬೇಕಾಗುತ್ತದೆ. ಈ ಮಾಹಿತಿಯನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಳಿನ್‌ ಅತುಲ್, ಉಪ ವಿಭಾಗಾಧಿಕಾರಿ ಆಯುಕ್ತೆ ಶಿಲ್ಪಾ ಶರ್ಮಾ, ಐಎಎಸ್ ಪ್ರೋಬೆಷನರಿ ಅಧಿಕಾರಿ ನವೀನ್ ಭಟ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಕೊಳ್ಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಕ್ಷ್ಮೀಬಾಯಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕೆ.ವಿಜಯಾ, ಡಾ.ವಿಜಯ ಶಂಕರ, ಡಾ.ಮಹ್ಮದ್ ಶಕೀರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !