ಸೋಮವಾರ, ಜುಲೈ 4, 2022
25 °C
ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆ

ಪ್ರಧಾನಿ ಮೋದಿ ಸುಳ್ಳಿನ ಸರದಾರ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಬ್ಬ ಸುಳ್ಳಿನ ಸರದಾರ. ಹಸಿ ಸುಳ್ಳುಗಳನ್ನು ಹೇಳುತ್ತಲೇ ಜನರ ಮರಳು ಮಾಡುವುದರಲ್ಲಿ ಅವರು ನಿಸ್ಸೀಮರಾಗಿದ್ದಾರೆ. ಇಂಥವರಿಗೆ ದೇಶದ ಜನತೆ ತಕ್ಕ ಪಾಠ ಕಲಿಸುವ ಅಗತ್ಯವಿದೆ‘ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಸ್ಥಳೀಯ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ನಡೆದ ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳಾಗಿದ್ದು, ಇದುವರೆಗೂ ಕೊಟ್ಟ ಯಾವುದೇ ಒಂದು ಭರವಸೆ ಈಡೇರಿಸಿಲ್ಲ. ಚುನಾವಣೆ ಸಮಯದಲ್ಲಿ ಜಾತಿ, ಧರ್ಮ, ದೇವರುಗಳ ಹೆಸರಿನಲ್ಲಿ ಭಾವನಾತ್ಮಕ ವಿಷಯ ಕೆದಕಿ ಜನರ ದಿಕ್ಕು ತಪ್ಪಿಸುವುದು ಬಿಜೆಪಿ ಕುತಂತ್ರವಾಗಿದೆ. ಹೀಗಾಗಿ ಮತದಾರರು ಜಾಗೃತರಾಗುವ ಮೂಲಕ ವಿಧಾನ ಪರಿಷತ್ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಸೋಲಿಸಿ ಪಾಠ ಕಲಿಸಬೇಕು’ ಎಂದರು.

ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆ ಮಾಡೋಕೆ ಯೋಗ್ಯತೆ ಇಲ್ಲದಿದ್ದರೂ ಸಹ ಅಧಿಕಾರ ದುರುಪಯೋಗ ಪಡಿಸಿಕೊಂಡು, ಹಣದ ಹೊಳೆ ಹರಿಸುವ ಮೂಲಕ ಚುನಾವಣೆ ನಡೆಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪುರ ಗೆಲ್ಲುವುದು ಖಚಿತ’ ಎಂದರು.

ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಡಿ.ಎಸ್.ಹೂಲಗೇರಿ, ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಸನಸಾಬ ದೋಟಿಹಾಳ, ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣೇಗೌಡ ಬಯ್ಯಾಪುರ ಮಾತನಾಡಿದರು.

ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ, ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಜಾಫರ್ ಜಾಗೀರದಾರ್, ಎಂ.ಲಿಂಗಪ್ಪ ದಢೇಸುಗೂರು, ಅಶೋಕ ಭೂಪಾಲ ಇದ್ದರು. ಅನಿಲಕುಮಾರ ನಿರೂಪಿಸಿದರು.

ಹೊರನಡೆದ ಕೆ.ಕರಿಯಪ್ಪ ಬೆಂಬಲಿಗರು: ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಲು ಆರಂಭಿಸುತ್ತಿದ್ದಂತೆ ವೇದಿಕೆಯತ್ತ ಬಂದ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ‘ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪರನ್ನು ಏಕೆ ಕರೆದಿಲ್ಲ. ಚುನಾವಣೆ ನಿಮಿತ್ಯ ಬ್ಯಾನರ್‌ನಲ್ಲಿ ಕರಿಯಪ್ಪ ಅವರ ಭಾವಚಿತ್ರ ಹಾಕಿರಿ, ಈ ಹಿಂದಿನ ಬ್ಯಾನರ್‌ಗಳಲ್ಲಿ ಫೋಟೋ ಹಾಕಿಲ್ಲ. ನಮ್ಮ ನಾಯಕರೇ ಇಲ್ಲ ಅಂದ ಮೇಲೆ ನಾವು ಇರಲ್ಲ’ ಎಂದು ಹೊರನಡೆದರು. ಬಿ.ವಿ.ನಾಯಕ, ರಾಘವೇಂದ್ರ ಹಿಟ್ನಾಳ ಮನವೋಲಿಸಿದರೂ ಸದಸ್ಯರು ಕೇಳಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು