ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಹೊರಗುತ್ತಿಗೆ ಸಿಬ್ಬಂದಿ ಹೋರಾಟ, ವಿದ್ಯಾರ್ಥಿಗಳ ಪರದಾಟ!

ಸಮಸ್ಯೆ ಪರಿಹಾರಕ್ಕೆ ಮುಂದಾಗದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು
Last Updated 23 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ!

ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ಹಾಗೂ ವಸತಿ ಶಾಲೆಗಳಿರುವ ವಸತಿ ನಿಲಯಗಳ ಅಡುಗೆಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಈ ಸಿಬ್ಬಂದಿಗೆ ವೇತನ ಜಮಾಗೊಳಿಸಿಲ್ಲ. ಹೀಗಾಗಿ ದೈನಂದಿನ ಬದುಕಿನ ಸಂಕಷ್ಟ ತಾಳಲಾರದೆ ಸಿಬ್ಬಂದಿಯು ಕಳೆದ ನಾಲ್ಕು ತಿಂಗಳುಗಳಿಂದ ಮೇಲಿಂದ ಮೇಲೆ ಆಯಾ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದಾರೆ.

ಇದು ಪರೋಕ್ಷವಾಗಿ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತಿದೆ. ಸಿಬ್ಬಂದಿಯು ಹೋರಾಟ ಮಾಡುವುದಕ್ಕೆ ಹೋದಾಗ, ವಸತಿ ನಿಲಯಗಳಲ್ಲಿ ಸಕಾಲಕ್ಕೆ ಊಟ, ಉಪಹಾರ ದೊರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಹಾರ ದೊರಕಿಸದ ಕಾರಣ ನಮಗೂ ತೊಂದರೆ ಆಗುತ್ತಿದೆ. ಬಡ ಸಿಬ್ಬಂದಿಯನ್ನು ನಾವು ಪ್ರಶ್ನಿಸುವುದಕ್ಕೆ ಆಗುವುದಿಲ್ಲ. ವಸತಿ ನಿಲಯದ ವಾರ್ಡನ್‌ಗಳು ಈ ವಿಷಯದಲ್ಲಿ ಅಸಹಾಯಕರಾಗಿದ್ದಾರೆ. ಕನಿಷ್ಠ ಒಂದು ತಿಂಗಳಲ್ಲಿ ನಾಲ್ಕು ಸಲ ಪ್ರತಿಭಟನೆ ಮಾಡುವುದಕ್ಕೆ ಹೋಗುತ್ತಾರೆ‘ ಎಂದುಹೆಸರು ಹೇಳಲಿಚ್ಚಿಸದ ಮಂತ್ರಾಲಯ ಮಾರ್ಗದ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ನಿಲಯದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

’ಅನಿವಾರ್ಯವಾಗಿ ವಿದ್ಯಾರ್ಥಿಗಳು ಊಟ, ಉಪಹಾರವನ್ನು ಹೋಟೆಲ್‌ಗಳಲ್ಲಿ ತೆಗೆದುಕೊಳ್ಳುವುದಕ್ಕೆ ಹಣ ಖರ್ಚು ಮಾಡಬೇಕಾಗುತ್ತಿದೆ. ಹಣವಿಲ್ಲದ ಕಡುಬಡವ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಗೈರುಹಾಜರಾಗುತ್ತಾರೆ. ಅನ್ನ, ಸಾಂಬಾರು ಸೇವಿಸುವುದಕ್ಕಾಗಿ ವಸತಿ ನಿಲಯದಲ್ಲೇ ಉಳಿದುಕೊಳ್ಳುತ್ತಾರೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT