ಶನಿವಾರ, ಆಗಸ್ಟ್ 13, 2022
26 °C

ಖಾಸಗಿ ಆಸ್ಪತ್ರೆ ಸೇವೆ ಸ್ಥಗಿತ: ರೋಗಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಭಾರತೀಯ ಔಷಧಿ ಕೇಂದ್ರ ಮಂಡಳಿ (ಸಿಪಿಎಐಂ) ಇತ್ತಿಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇಧ ಸ್ನಾತಕೋತ್ತರ ಕೋರ್ಸ್ ಗಳಿಗೆ ಜನರಲ್ ಸರ್ಜರಿ ನಾಮಾಂಕಿತ ನೀಡಿದ್ದನ್ನು ಖಂಡಿಸಿ ಶುಕ್ರವಾರ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಆಡಳಿತ ಮಂಡಳಿಯ ಪ್ರಮುಖರು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡಿಕೊಂಡು ಪ್ರತಿಭಟಿಸಿದರು.

ಖಾಸಗಿ ವೈದ್ಯರು ಧಿಡೀರ್ ಹೋರಾಟದ ತೀರ್ಮಾನದಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದಿಂದ ತುರ್ತು ಚಿಕಿತ್ಸೆಗೆ ಆಗಮಿಸಿದ ಹೊರ ರೋಗಿಗಳು ಪರದಾಡುವಂತಾಯಿತು. ಖಾಸಗಿ ಆಸ್ಪತ್ರೆಗಳಿರುವ ನಗರದ ಪೇಟ್ಲಾ ಬುರ್ಜ್, ಗಾಂಧಿ ಚೌಕ್, ಚಂದ್ರ ಮೌಳೇಶ್ವರ ರಸ್ತೆ ಪಟೇಲ್ ರಸ್ತೆ ಮತ್ತಿತರೆ ಇರುವ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಭೇಟಿ ನೀಡಿ ವಾಪಸಾಗುವುದು ಕಂಡುಬಂತು.

ಒಳ ರೋಗಿಗಳಿಗೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಚಿಕಿತ್ಸೆ ನೀಡುವ ಮೂಲಕ ರೋಗಿಗಳಿಗೆ ಸ್ಪಂದಿಸುತ್ತಿರುವುದು ಕಂಡುಬಂತು. ಕೇಂದ್ರ ಔಷಧಿ ಮಂಡಳಿ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆಯನ್ನು ಮತ್ತು ಅವರು ಸ್ವತಂತ್ರವಾಗಿ ಅಭ್ಯಾಸ ಮಾಡಲು ಅವಕಾಶ ನೀಡಿದ್ದಾರೆ. ಅವೈಜ್ಞಾನಿಕ ವಾಗಿ ಎಲ್ಲಾ ವೈದ್ಯ ಪದ್ದತಿ ಮಿಶ್ರಗೊಳಿಸುವ ತೀರ್ಮಾನ ಹಿಮ್ಮುಖ ಹೆಜ್ಜೆಯಾಗಿದೆ. ಇದು ಆಧುನಿಕ ವೈದ್ಯರಿಗೆ ಸಮನಾಗದ ಹೈಬ್ರಿಡ್ ವೈದ್ಯರನ್ನು ತಯಾರಿಸಿದಂತಾಗುತ್ತದೆ ಎಂದು ದೂರಿದರು.

ಎನ್.ಎಮ್ ಸಿ ಕಾಯ್ದೆಯ ಸೆಕ್ಷನ್ 32ರ ಪ್ರಕಾರ ಎಲ್ಲಾ ವೈದ್ಯಕಿಯೇತರ ಸಮುದಾಯ ಆರೋಗ್ಯ ರಕ್ಷಕರ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಅವಕಾಶ ನೀಡಿ ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತದೆ. ಎಲ್ಲಾ ವಿವಿಧ ವೈದ್ಯಪದ್ದತಿಗಳ ಶುದ್ದಿಯೇ ಭಾರತೀಯ ವೈದ್ಯಕೀಯ ಸಂಘದ ಗುರಿಯಾಗಿದೆ. ಪ್ರತಿಯೊಂದು ಔಷಧಿ ಪದ್ದತಿಯ ವೈದ್ಯರು ಬೇರೆಯಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಗ್ಯಾಂಗ್ರೀನ್, ಹಲ್ಲಿನ ರೂಟ್ ಕೆನಾಲ್, ಅಪೆಂಡಿಕ್ಸ್, ಪಿತ್ತಕೋಶ ಅಪಾಯವಲ್ಲದ ಗೆಡ್ಡೆ ತೆಗೆಯುವುದು ಮೊದಲಾದ ಶಸ್ತ್ರ ಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ನಿಯಮ ಹೊರಡಿಸಿದೆ. ಇದರಿಂದಾಗಿ ಖಾಸಗಿ ಅಲೋಪತಿ ವೈದ್ಯರ ಸೇವೆಗೆ ಸಮಸ್ಯೆಯಾಗಲಿದೆ. ಅವೈಜ್ಞಾನಿಕ ನಿಯಮ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.