ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರದ ಕೃತಕ ಅಭಾವಕ್ಕೆ ಕಡಿವಾಣ ಹಾಕಿ: ಶಾಸಕ ಬಸನಗೌಡ ದದ್ದಲ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ ಸೂಚನೆ
Last Updated 2 ಜುಲೈ 2022, 13:01 IST
ಅಕ್ಷರ ಗಾತ್ರ

ರಾಜಲಬಂಡಾ (ಮಾನ್ವಿ): ‘ನಕಲಿ ಬೀಜ ಮಾರಾಟ ಹಾಗೂ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ವಂಚಿಸುವವರ ವಿರುದ್ಧ ಅಧಿಕಾರಿಗಳು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು' ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಹೇಳಿದರು.

ಶನಿವಾರ ತಾಲ್ಲೂಕಿನ ರಾಜಲಬಂಡಾ ಪ್ರವಾಸಿ ಮಂದಿರದಲ್ಲಿ ಕುರ್ಡಿ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

’ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ನಿಯೋಜಿಸಿ ರೈತರಿಗೆ ವಂಚಿಸುವವರ ಬಗ್ಗೆ ‌ನಿಗಾವಹಿಸಬೇಕು' ಎಂದು ಅವರು ಸಲಹೆ ನೀಡಿದರು.

ಕುರ್ಡಿ ಮತ್ತು ರಾಜಲಬಂಡಾ ಗ್ರಾಮಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮಂಜೂರಿಗೆ ಪ್ರಸ್ತಾವ ಸಲ್ಲಿಸಬೇಕು. ಶಾಲೆಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಭೋಜನಾಲಯ ನಿರ್ಮಾಣ, ಹೆಚ್ಚುವರಿ ಕೊಠಡಿಗಳು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬಿಇಒ ಚಂದ್ರಶೇಖರ ದೊಡ್ಡಮನಿ ಹಾಗೂ ಪಿಡಿಒ ನಾಗಭೂಷಣ ಕಾಂಬ್ಳೆ ಅವರಿಗೆ ಸೂಚಿಸಿದರು.

ಜೂಕೂರು, ಕಂಬಳತ್ತಿ, ವಲ್ಕಂದಿನ್ನಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕದ ಆರಂಭಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಶಾಸಕ ಬಸನಗೌಡ ದದ್ದಲ ಜೆಸ್ಕಾಂ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಅಮೃತ ಸರೋವರ ಯೋಜನೆ ಅಡಿಯಲ್ಲಿ ಗಣೇಶ ಕ್ಯಾಂಪ್, ಕುರ್ಡಿ, ಸುಂಕೇಶ್ವರ, ಕೊರವಿ ಹಾಗೂ ಗೋರ್ಕಲ್ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.

ಸಾದಾಪುರ ಹಾಗೂ ಸುತ್ತಲಿನ ಗ್ರಾಮಗಳು ದೂರದ ಪೋತ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇರುವ ಕಾರಣ ಗ್ರಾಮಸ್ಥರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಿದೆ. ಮಾನ್ವಿ ಸಾರ್ವಜನಿಕ ಆಸ್ಪತ್ರೆಯ ವ್ಯಾಪ್ತಿಗೆ ಈ ಗ್ರಾಮಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಲು ಅವರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಅವರಿಗೆ ಸೂಚಿಸಿದರು.

ಜುಲೈ16ರಂದು ' ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ' ಕಾರ್ಯಕ್ರಮವನ್ನು ಗೋರ್ಕಲ್ ಗ್ರಾಮದಲ್ಲಿ ಆಯೋಜನೆಗೆ ಸಿದ್ಧತೆ ಕೈಗೊಳ್ಳಲು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಣ್ಣಾರಾವ್, ತಹಶೀಲ್ದಾರ್ ಚಂದ್ರಕಾಂತ, ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಹೇಬ, ಸಿಡಿಪಿಒ ಸುಭದ್ರಾ ದೇವಿ, ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಬಸವರಾಜ , ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT