ಕಡದಾರಗಡ್ಡೆಗೆ ಸೇತುವೆ ನಿರ್ಮಿಸಲು ಪ್ರಸ್ತಾವ

7

ಕಡದಾರಗಡ್ಡೆಗೆ ಸೇತುವೆ ನಿರ್ಮಿಸಲು ಪ್ರಸ್ತಾವ

Published:
Updated:
Deccan Herald

ರಾಯಚೂರು: ನಾರಾಯಣಪುರ ಅಣೆಕಟ್ಟೆ ಹೊರಹರಿವು ಹೆಚ್ಚಳದಿಂದ ಪ್ರತಿವರ್ಷ ಸಮಸ್ಯೆ ಉಂಟಾಗುವ ಕಡದಾರಗಡ್ಡೆಯಲ್ಲಿ ಸೇತುವೆ ನಿರ್ಮಿಸಲು ₨10 ಕೋಟಿ ಅನುದಾನ ಅಗತ್ಯವಿದ್ದು, ಇದಕ್ಕಾಗಿ ಮೈಕ್ರೊ ಯೋಜನೆಯಡಿ ಅನುದಾನ ಒದಗಿಸುವಂತೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಕಾರ್ಯದರ್ಶಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಯಚೂರು ತಾಲ್ಲೂಕಿನ ಕುರವಕುಲ, ಕುರವಕುರ್ದಾಗಳಲ್ಲಿ ಸೇತುವೆ ನಿರ್ಮಾಣ ಪ್ರಗತಿಯಲ್ಲಿದೆ. ವರ್ಷದಲ್ಲಿ ಮೂರು ತಿಂಗಳು ಮಾತ್ರ ಕಾಮಗಾರಿ ಕೈಗೊಳ್ಳಬೇಕಿದೆ. ನಾರದಗಡ್ಡೆಯಲ್ಲಿ ಸೇತುವೆ ನಿರ್ಮಿಸಲು ಏಳು ಸಲ ಟೆಂಡರ್‌ ಆಹ್ವಾನಿಸಿದರೂ ಸ್ಪಂದನೆ ಬಂದಿಲ್ಲ ಎಂದರು.

ಜಿಲ್ಲೆಯಲ್ಲಿ ಶೇ 41 ರಷ್ಟು ಮಳೆ ಕೊರತೆ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಲ್ಲಿಯವರೆಗೂ ಶೇ 28 ರಷ್ಟು ಮಾತ್ರ ಬಿತ್ತನೆ ಆಗಿದೆ. ಇದೀಗ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಲಭ್ಯವಾಗುವುದರಿಂದ ಸುಮಾರು ಎರಡು ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಮಾತನಾಡಿ, ಕಾಲುವೆ ನೀರು ಲಭ್ಯವಿಲ್ಲದ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿ ಹೊಂಡಗಳು, ಚೆಕ್‌ಡ್ಯಾಂ ನಿರ್ಮಾಣಕ್ಕೆ ಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೇ 41 ಮಳೆ ಕೊರತೆ ಆಗಿರುವುದು ಕಳವಳಕಾರಿ. ಗುಳೆ ಹೋಗುವುದನ್ನು ತಪ್ಪಿಸಬೇಕಿದೆ. ಇದಕ್ಕಾಗಿ ತಯಾರಿ ಮಾಡಿಕೊಳ್ಳಲು ತಿಳಿಸಳಾಗಿದೆ ಎಂದರು.

ಆರ್‌ಟಿಪಿಎಸ್‌ ಹಳೇ ಘಟಕಗಳು ತುಂಬಾ ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿವೆ. ರಾಜ್ಯದಲ್ಲಿ ಸದ್ಯಕ್ಕೆ ಖಾತರಿ ವಿದ್ಯುತ್‌ ಒದಗಿಸುವ ಸ್ಥಾವರ ಎಂದು ಗುರುತಿಸಲಾಗಿದೆ. ಹೀಗಾಗಿ 2022 ರ ವೇಳೆಗೆ ಹಳೇ ಸ್ಥಾವರ ತೆಗೆದುಹಾಕುವ ಯೋಜನೆಯಿಲ್ಲ. ಕೆಲವೊಂದು ಅಗತ್ಯ ಮಾರ್ಪಾಡು ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯಕ್ಕೆ ಕಲ್ಲಿದ್ದಲು ಪಡೆಯುವುದಕ್ಕೆ ವಿವಿಧ ಆಯಾಮಗಳಲ್ಲಿ ಕೇಂದ್ರದೊಂದಿಗೆ ಸರ್ಕಾರ ಚರ್ಚಿಸಿದೆ. ಕಲ್ಲಿದ್ದಲು ಸಚಿವಾಲಯವು ಹೊಸ ಕಲ್ಲಿದ್ದಲು ಗಣಿಗಳನ್ನು ಗುರುತಿಸಿ ಈಚೆಗೆ ಅಧಿಸೂಚನೆ ಹೊರಡಿಸಿದೆ. ಹೊಸ ಗಣಿಗಾಗಿ ಅರ್ಜಿ ಸಲ್ಲಿಸಬೇಕು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಭೂ ವಿಜ್ಞಾನ ಇಲಾಖೆಯು ಗಣಿಯ ಕುರಿತು ದಾಖಲಿಸಿದ ಮಾಹಿತಿ ಆಧರಿಸಿ ಅರ್ಜಿ ಹಾಕುವ ತಯಾರಿ ನಡೆದಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಳಿನ್‌ ಅತುಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !