ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳೆ ಪಠ್ಯಪುಸ್ತಕ ಮುಂದುವರಿಸಿ’

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ
Last Updated 6 ಜುಲೈ 2022, 4:02 IST
ಅಕ್ಷರ ಗಾತ್ರ

ರಾಯಚೂರು:ರೋಹಿತ್ ಚಕ್ರತೀರ್ಥ ಅವರಿಗೆ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಹೊಣೆಗಾರಿಕೆ ನೀಡಿ ಬಿಜೆಪಿ ಸರ್ಕಾರ ಮತ್ತು ಶಿಕ್ಷಣ ಸಚಿವರು ಇಡೀ ನಾಡಿನ ಮಕ್ಕಳ ಭವಿಷ್ಯಕ್ಕೆ ಕೇಡು ಬಗೆದಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿಯ ಹಳೆ ಪಠ್ಯಗಳನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹೊಸ ಸಮಿತಿಯಿಂದ ರಚನೆಯಾದ ಪುಸ್ತಕಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಅಣ್ಣ ಬಸವಣ್ಣ, ರಾಷ್ಟ್ರಕವಿ ಕುವೆಂಪು, ಮಹಾತ್ಮ ಗೌತಮಬುದ್ಧ ಹಾಗೂ ಮಹಾರಾಜರು, ಸಮಾಜ ಸುಧಾರಕರು, ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಸುರಪುರದ ರಾಜವೆಂಕಟಪ್ಪ ನಾಯಕರನ್ನೊಳಗೊಂಡು ಎಲ್ಲರನ್ನು ಅವಮಾನ ಮಾಡಲಾಗಿದೆ. ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್, ನಾರಾಯಣಗುರು, ಟಿಪ್ಪುಸುಲ್ತಾನ್ ಸೇರಿದಂತೆ ಹಲವು ದಾರ್ಶಕನಿಕ ಮಹಾ ಪುರುಷರ ಬಗೆಗಿನ ಪಾಠಗಳನ್ನು ಕೈಬಿಟ್ಟು ಮನುವಾದದ ವಿಷವನ್ನು ತುಂಬಿರುವುದು ಫ್ಯಾಸಿಸ್ಟ್ ಸರ್ಕಾರದ ಜನದ್ರೋಹಿ ನೀತಿಗೆ ಸಾಕ್ಷಿಯಾಗಿದೆ. ಈ ಕುತಂತ್ರವನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದರು.

ಪಠ್ಯ, ಪರಿಶೀಲನಾ ಸಮಿತಿಯು ಮಕ್ಕಳಿಗೆ ವೈಚಾರಿಕ ಮನೋಭಾವದ ಪಾಠಗಳನ್ನು ಅಳವಡಿಸಬೇಕು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿ ಮನುವಾದಿಗಳಿಗೆ ಬೇಕಾದ ಹಾಗೆ ಪಠ್ಯಗಳನ್ನು ತಿದ್ದುಪಡಿ ಮಾಡಿ, ಕೆಲವನ್ನು ಅನಗತ್ಯವಾಗಿ ಸೇರಿಸಿ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ. ಇದು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪಠ್ಯದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಇಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಪೂರ್ವ ಗ್ರಹಪೀಡಿತರಾಗಿ, ಪಠ್ಯಪರಿಶೀಲನೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪಠ್ಯ ಪುಸ್ತಕದಲ್ಲಿ ಅವಮಾನ ಮಾಡಲಾಗಿದೆ. 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಡಾ.ಚೆನ್ನಣ್ಣ ವಾಲಿಕಾರ ಬರೆದಿದ್ದ ‘ನೀ ಹೋದ ಮರುದಿನ’ ಎಂಬ ಕವಿತೆಯನ್ನು ತೆಗೆದುಹಾಕಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ಹೊರಹಾಕಿದರು. ಜಿಲ್ಲಾ ಸಂಚಾಲಕರಾದ ಎಚ್‌.ರಂಗಪ್ಪ ಹೆಗಡೆ, ಮಂಜುನಾಥ ಸಿಂಧನೂರ, ಮಾರೆಪ್ಪ ಮಾಚನೂರ, ತಾಲ್ಲೂಕು ಸಂಚಾಲಕರಾದ ಶರಣಪ್ಪ ಹಂಚಿನಾಳ, ಮಲ್ಲೇಶ, ರಂಗನಾಥ ಜಾಲಹಳ್ಳಿ, ಟಿ.ಎಸ್‌.ಮಾರೆಪ್ಪ, ಖಾಜಾಸಾಬ್‌, ನಾಗಪ್ಪ, ದುರುಗೇಶ ಕಲ್ಮಂಗಿ ಹಾಗೂ ಸಣ್ಣಬಸವ ಅಲಬನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT