ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ವ್ಯಕ್ತವಾದ ಆಕ್ರೋಶ: ಸಂಚಾರ ಅಸ್ತವ್ಯಸ್ತ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್‌ ಭಾವಚಿತ್ರ ತೆರವು ಘಟನೆ
Last Updated 27 ಜನವರಿ 2022, 15:26 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ತೆರವುಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಗುರುವಾರ ಅಕ್ರೋಶ ವ್ಯಕ್ತವಾಯಿತು.

ದಲಿತ ಸಂಘಟನೆಗಳ ಒಕ್ಕೂಟ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆ ಸಂಚಾರ ತಡೆದು ಬೆಳಿಗ್ಗೆಯಿಂದ ಪ್ರತಿಭಟನೆ, ಮೆರವಣಿಗೆ ಹಾಗೂ ಧರಣಿ ನಡೆಸಿದವು. ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಘೋಷನೆಗಳನ್ನು ಕೂಗಿದರು.

ಸಾತ್‌ಮೈಲ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಮಾರ್ಗಗಳಲ್ಲಿ, ಬಸವೇಶ್ವರ ವೃತ್ತ, ಹೈದರಾಬಾದ್‌ ರಸ್ತೆ, ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ, ಡಾ.ಬಾಬು ಜಗಜೀವನರಾಂ ವೃತ್ತಗಳಲ್ಲಿ ವಾಹನ ಸಂಚಾರವನ್ನು ತಡೆದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಯಿತು. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ, ಸರ್ಕಾರಿ ಬಸ್‌ ಹಾಗೂ ಇತರೆ ಖಾಸಗಿ ಭಾರಿ ವಾಹನಗಳು ಮಧ್ಯಾಹ್ನದವರೆಗೂ ರಸ್ತೆಯಲ್ಲೇ ನಿಂತುಕೊಂಡಿದ್ದವು.

ಕೇಂದ್ರ ಬಸ್‌ ನಿಲ್ದಾಣದ ಮುಖ್ಯ ಮಾರ್ಗದಲ್ಲಿ ಪ್ರತಿಭಟನಾಕಾರರು ಕುಳಿತಿದ್ದರು. ಕೆಲವು ಬಸ್‌ಗಳು ಪಾರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಹಾಗೂ ವಿವಿಧೆಡೆಯಿಂದ ರಾಯಚೂರು ನಗರಕ್ಕೆ ಬಂದಿರುವ ಜನರು ದೂರದಿಂದ ರಸ್ತೆಗಳಲ್ಲಿ ನಡೆದುಕೊಂಡು ಬರುವುದು ಸಾಮಾನ್ಯವಾಗಿತ್ತು.

ಮಧ್ಯಾಹ್ನ 3 ಗಂಟೆ ಬಳಿಕ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಮತ್ತು ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಆರಂಭವಾಯಿತು. ಆದರೆ, ಸಂಜೆ 4 ಗಂಟೆಯಿಂದ ಮತ್ತೆ ರಸ್ತೆ ತಡೆ ಆರಂಭಿಸಿದ ಪ್ರತಿಭಟನಾಕಾರರು, ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪಟ್ಟು ಹಿಡಿದರು. ಈ ಸಂಬಂಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದರು.

ಕೊನೆಗೆ ರಾತ್ರಿ 7 ಗಂಟೆ ಬಳಿಕ ಸದರ್‌ ಬಜಾರ್‌ ಠಾಣೆಗೆ ಪ್ರತಿಭಟನಾಕಾರರು ಸಲ್ಲಿಸಿದ ದೂರು ಸ್ವೀಕೃತವಾಯಿತು. ಇದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಶುಕ್ರವಾರ ಮಧ್ಯಾಹ್ನದವರೆಗೂ ಎಫ್‌ಐಆರ್‌ ದಾಖಲಿಸಿಕೊಳ್ಳದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ನಡೆದ ಧರಣಿಯಲ್ಲಿ ಅನೇಕರು ಮಾತನಾಡಿ, ನ್ಯಾಯಾಧೀಶರು ಮಾಡಿದ್ದು ಸರಿಯಿಲ್ಲ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ನರಸಪ್ಪ ದಂಡೋರ, ಎ.ವಸಂತಕುಮಾರ್‌, ವಿಶ್ವನಾಥ ಪಟ್ಟಿ, ಎಂ.ವಿರೂಪಾಕ್ಷಿ, ರವೀಂದ್ರನಾಥ ಪಟ್ಟಿ, ಆರ್‌.ಮಾನಸಯ್ಯ, ಅಂಬಣ್ಣ ಅರೋಲಿಕರ್, ಆದೆಪ್ಪ ಛಲವಾದಿ, ಎಂ.ಈರಣ್ಣ, ರಜಾಕ್‌ ಉಸ್ತಾದ್‌, ರಾಜೇಶ ಕರಾಟೆ, ವಸಂತ ಅಸ್ಕಿಹಾಳ, ಶಶಿಕಲಾ ಭೀಮರಾಯ, ರಾಘವೇಂದ್ರ ಭೂರಡ್ಡಿ, ಹೇಮರಾಜ ಅಸ್ಕಿಹಾಳ, ತೌಸಿಫ್‌ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಮಾದಿಗ ದಂಡೋರಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಛಲವಾದಿ ಸಂಘ, ಭೋವಿ ಸಮಾಜ, ಜಿಲ್ಲಾ ಅಲೆಮಾರಿ ಸಂಘ, ಬಿಜೆಪಿ ಯುವ ಮೋರ್ಚಾ, ನೌಕರರ ಸಂಘ ಸೇರಿದಂತೆ 14 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT