ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ನಿಯಮ ತಿದ್ದುಪಡಿಗೆ ಖಂಡನೆ

ಹಕ್ಕು ವಂಚಿತ ಪಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 30 ಮಾರ್ಚ್ 2019, 14:05 IST
ಅಕ್ಷರ ಗಾತ್ರ

ರಾಯಚೂರು: ಆರ್‌ಟಿಇ ಕಾಯ್ದೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕೈಬಿಟ್ಟಿರುವುದು ವಿರೋಧಿಸಿ ಆರ್‌ಟಿಇ ವಂಚಿತ ಪಾಲಕರ ಸಂಘದ ನೇತೃತ್ವದಲ್ಲಿ ನಗರದ ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಸಂವಿಧಾನದ ಪ್ರಕಾರ 6ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಇದಕ್ಕಾಗಿ ಶಿಕ್ಷಣ ಹಕ್ಕು ಕಾಯ್ದೆ 2009ನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ 2012ರಲ್ಲಿ ನಿಯಮಗಳನ್ನು ರೂಪಿಸಿ ನೆರೆಹೊರೆಯ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪ್ರವೇಶ ದೊರಕಿಸಿಕೊಟ್ಟಿದೆ. ಆದರೆ, ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಶಿಕ್ಷಣ ಹಕ್ಕು ಕಾಯ್ದೆಯಿಂದ ಬಡವರ ಮಕ್ಕಳು ಕೂಡ ಶ್ರೀಮಂತರ ಮಕ್ಕಳು ಓದುವ ಅವಕಾಶ ಪಡೆದುಕೊಂಡಿದ್ದರು. ಆದರೆ, ನಿಯಮಗಳನ್ನು ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇದ್ದರೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ ಎಂದು ದೂರಿದರು.

ಸರ್ಕಾರದ ಈ ನಿರ್ಧಾರದಿಂದ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಸರ್ಕಾರದ ಕ್ರಮದಿಂದ ಬಡ ಮತ್ತು ದುರ್ಬಲ ವರ್ಗದ ಮಕ್ಕಳು ಉತ್ತಮ ಅವಕಾಶ ಕಳೆದುಕೊಂಡಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ಒತ್ತಡ ತಂದು ಬಡಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕತೆ ಸ್ಥಿತಿಯ ಆಧಾರದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರವೇ ಮುಂದಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರಕ್ಕೆ ಹಲವು ಮಾರ್ಗಗಳಿದ್ದು, ಅವುಗಳನ್ನು ಅನುಸರಿಸದೇ ಮಾರಕವಾದ ನೀತಿ ಅನುಸರಿಸುತ್ತಿದೆ ಎಂದರು.

ಕಳೆದ 10 ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ನಿಯಮಗಳನ್ನು ಮುಂದುವರೆಸಿಕೊಂಡು ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಲು ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸಿರಾಜ್ ಜಾಫ್ರಿ, ರವಿಕುಮಾರ, ಕೃಷ್ಣಯ್ಯ, ಹಾಜಿಪಾಷ, ಬಸವರಾಜ, ರಘುಪತಿ ನಾಯಕ, ಶರಣಬಸವ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT