ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಒಂದೊಂದೇ ಕಚೇರಿಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಕಚೇರಿ ಸ್ಥಳಾಂತರಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲವೆನೋ ಎಂದು ರಾಜಕಾರಣಿಗಳು ತತ್ಸಾರ ಮನೋಭಾವ ತಾಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ಆದೇಶ ಹಟ್ಟಿ ಅವರಿಗೆ ಮನವಿ ಸಲ್ಲಿಸಿ,‘ ಲಿಂಗಸುಗೂರಿನಿಂದ ಸಿಂಧನೂರು ತಾಲ್ಲೂಕಿಗೆ ಸ್ಥಳಾಂತರಗೊಳಿಸಿದ ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಪುನಃ ಲಿಂಗಸುಗೂರಿನಲ್ಲಿ ಮುಂದುವರಿಸಿ ಆದೇಶ ಹೊರಡಿಸಬೇಕು’ ಎಂದು ಮನವಿ ಮಾಡಿದರು.
ಈಗಾಗಲೇ ಮಂಜೂರಾತಿ ಹಂತದ ಪ್ರಾದೇಶಿಕ ಸಾರಿಗೆ ಕಚೇರಿ, ಸಹಕಾರಿ ಸಂಘಗಳ ಕಚೇರಿಗಳನ್ನು ಸಿಂಧನೂರಿಗೆ ತೆಗೆದುಕೊಳ್ಳಲಾಗಿದೆ. ಲಿಂಗಸುಗೂರಿನಲ್ಲಿರುವ ಕೆಪಿಟಿಸಿಎಲ್ ಕಚೇರಿಯನ್ನು ಕೂಡ ಸಿಂಧನೂರಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಲಾಗಿದೆ. ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿ ಜೊತೆಗೆ ಮೇಲಿನ ಕಚೇರಿಗಳನ್ನು ಲಿಂಗಸುಗೂರಿಗೆ ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜಕಾರಣಿಗಳು ಕಚೇರಿಗಳ ಸ್ಥಳಾಂತರ ವಿಷಯದಲ್ಲಿ ಮೌನಕ್ಕೆ ಜಾರಿದ್ದಾರೆ. ಕಚೇರಿಗಳ ಸ್ಥಳಾಂತರದ ಹಿಂದೆ ಹೊಂದಾಣಿಕ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಭವಿಷ್ಯದಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಾಂತರಗೊಂಡ ಹಾಗೂ ಹೊಸದಾಗಿ ಮಂಜೂರು ಆಗಬೇಕಾಗಿರುವ ಕಚೇರಿಗಳನ್ನು ಲಿಂಗಸುಗೂರಿಗೆ ತಂದುಕೊಳ್ಳಲು ಪಕ್ಷಾತೀತವಾಗಿ ರಾಜಕಾರಣಿಗಳು ಮುಂದಾಗಬೇಕು. ಇಲ್ಲವೆ ಸಂಘಟನೆಗಳು ಕರೆ ನೀಡಿದ ಲಿಂಗಸುಗೂರು ಉಳಿಸಿ ಜಿಲ್ಲಾ ಕೇಂದ್ರ ಘೋಷಿಸಿ ಹೋರಾಟ ಬೆಂಬಲಿಸಿ ಬೀದಿಗಿಳಿಯಬೇಕು ಎಂದರು.
ಮುಖಂಡರಾದ ನರಸಣ್ಣ ನಾಯಕ, ರಮೇಶ ವೀರಾಪುರ, ನಿಂಗಪ್ಪ ಎಂ, ಆಂಜನೇಯ ನಾಗಲಾಪುರ, ಹನುಮಂತ ಚಲವಾದಿ, ಶಿವಪ್ಪ ವ್ಯಾಕರನಾಳ, ಸದ್ದಾಂ ಹುಸೇನ್, ಬಾಬಾಖಾಜಿ ಹಾಗೂ ಅಲ್ಲಾಭಕ್ಷ ನೇತೃತ್ವ ವಹಿಸಿದ್ದರು.