ಗುರುವಾರ , ಆಗಸ್ಟ್ 18, 2022
25 °C

ಏಮ್ಸ್‌ ಹೋರಾಟಕ್ಕೆ ‘ನವೋದಯ’ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 55ನೇ ದಿನಕ್ಕೆ ಕಾಲಿರಿಸಿದ್ದು, ನಗರದ ನವೋದಯ ಶಿಕ್ಷಣ ಸಂಸ್ಥೆ ಬೆಂಬಲ ಸೂಚಿಸಿದೆ.

ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವೈದ್ಯರು ಮತ್ತು ಪ್ರಾಧ್ಯಾಪಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ನವೋದಯ ಶಿಕ್ಷಣ ಸಂಸ್ಥೆಯ ರಿಜಿಸ್ಟಾರ್‌ ಟಿ.ಶ್ರೀನಿವಾಸರಾವ್‌ ಹೋರಾಟವನ್ನು ಬೆಂಬಲಿಸಿ ಮಾತನಾಡಿ,‘ಏಮ್ಸ್ ಮಂಜೂರು ಮಾಡುವವರೆಗೂ ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ನಮ್ಮ ನವೋದಯ ಶಿಕ್ಷಣ ಸಂಸ್ಥೆ ಸಂಪೂರ್ಣ ಬೆಂಬಲ ಘೋಷಿಸುತ್ತದೆ’ ಎಂದರು.

ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಉಪಪ್ರಾಚಾರ್ಯ ಡಾ.ಆನಂದ ಮಾತನಾಡಿ,‘ರಾಯಚೂರಿನಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯಗಳಿರುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಪ್ರಾಣ ಮತ್ತು ಆರೋಗ್ಯ ರಕ್ಷಣೆಗಾಗಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕು. ಅಲ್ಲಿಯವರೆಗೂ ನಮ್ಮ ಬೆಂಬಲ ಇರುತ್ತದೆ’ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯವರು ರಕ್ತದಲ್ಲಿ ಸಹಿ ಮಾಡಿದರು.  ಹೋರಾಟ ಸಮಿತಿಯ ಡಾ.ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಎಸ್ ಮಾರೆಪ್ಪ, ಕಾಮ್ ರಾಜ್ ಪಾಟೀಲ, ವೆಂಕಟೇಶ ಆಚಾರಿ, ಮಿಮಿಕ್ರಿ ಬಸವರಾಜ, ಕೆ. ಗುರುರಾಜ ಕುಲಕರ್ಣಿ, ಸಂತೋಷ್ ಹಾಗೂ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.