ರಾಯಚೂರು: ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 9ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡಿದ್ದನ್ನು ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡಿದ್ದನ್ನು ಖಂಡಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಾರ್ಖಾನೆ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ರನ್ನು ರಾಜ್ಯ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗಿಕಾರ ಮಾಡಿದ್ದು ಕಾರ್ಮಿಕ ವಿರೋಧಿಯಾಗಿದೆ. ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
1948ರ ಕಾಯ್ದೆಯು ದಿನದ ಕೆಲಸದ ಅವಧಿಯ ಆರಂಭದಿಂದ ಗರಿಷ್ಟ 5ಗಂಟೆಗೆ 30 ನಿಮಿಷ ವಿರಾಮ ನೀಡಬೇಕು. ತಿದ್ದುಪಡಿ ವಿಧೇಯಕದಲ್ಲಿ ವಿರಾಮವಿಲ್ಲದೇ ದುಡಿಮೆ ಮಾಡುವ ಅವಧಿಯನ್ನು 5ಗಂಟೆಯಿಂದ 6 ಗಂಟೆಗೆ ಹೆಚ್ಚಿಸಲಾಗಿದ್ದು ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದರು.
ಉದ್ಯೋಗ ಕಡಿತ, ಕಡಿಮೆ ವೇತನಕ್ಕೆ ಅಧಿಕ ಉತ್ಪಾದನೆ ಮಾಡಿಕೊಳ್ಳುವುದು ಈ ಅವಧಿಯಲ್ಲಿ ಹೆಚ್ಚಾಗಿದೆ. ಕಾರ್ಖಾನೆ ಮಾಲೀಕರಿಗೆ 6ದಿನಗಳಲ್ಲಿ ಉತ್ಪಾದನೆಯಾಗುತ್ತಿದ್ದನ್ನು ಕೇವಲ 4 ದಿನದಲ್ಲಿ ಆಗುವಂತೆ ಮಾಡಿ ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ. ದುಡಿಮೆಯ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷತೆ, ಕೆಲಸದ ಅಭದ್ರತೆ, ಮಹಿಳೆಯರಿಗೆ ಕಿರುಕುಳ ಹೆಚ್ಚಾಗಿದ್ದು ಹೀಗಿದ್ದರೂ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಿಕೊಳ್ಳುವುದು ಮಹಿಳಾ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಡಿ.ಎಸ್ ಶರಣಬಸವ, ವೀರೇಶ ಎನ್ ಎಸ್, ಎಚ್ ಪದ್ಮಾ, ಬಾಷುಮಿಯಾ, ಆನಂದ, ಅಮರೇಗೌಡ ಸೇರಿದಂತೆ ಕಾರ್ಮಿಕರ ಮುಖಂಡರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.